ಚಿಕ್ಕೋಡಿ: ಕುಟುಂಬವೊಂದು ಆಶ್ರಮವೊಂದರ ಚಿಂತನೆಗಳನ್ನು ಅನುಕರಿಸಿ ದೇಹತ್ಯಾಗಕ್ಕೆ ಮುಂದಾದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರದಲ್ಲಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಕುಟುಂಬಸ್ಥರಿಗೆ ತಿಳಿಹೇಳಿದ್ದು, ಶರೀರ ತ್ಯಾಗ ತೀರ್ಮಾನಕ್ಕೆ ತಡೆಯೊಡ್ಡಿದ್ದಾರೆ.
ಹರಿಯಾಣದ ಆಶ್ರಮವೊಂದರ ಚಿಂತನೆಗಳಿಂದ ಅನಂತಪುರದ ಈರಕರ ಕುಟುಂಬದ ನಾಲ್ವರು ಈ ಅಸಾಮಾನ್ಯ ನಿರ್ಧಾರಕ್ಕೆ ಬಂದಿದ್ದರು. ಬಾಬಾ ಆಗಮಿಸಿ ನಮ್ಮನ್ನೆಲ್ಲ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ನಂಬಿಕೊಂಡ ಇಡೀ ಕುಟುಂಬ, ಮನೆಯ ಯಜಮಾನ ತುಕಾರಾಮ ನೇತೃತ್ವದಲ್ಲಿ ಈ ಸಾಮೂಹಿಕ ದೇಹತ್ಯಾಗಕ್ಕೆ ಮುಂದಾಗಿತ್ತು. ಆಶ್ರಮದ ಚಿಂತನೆಗಳಿಂದ ಪ್ರಭಾವಿತರಾದ ಕುಟುಂಬಸ್ಥರು ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ 6, 7, 8 ಮೂರು ದಿನಗಳ ಕಾಲ ಭಜನೆ, ಪಾರ್ಥನೆಗಳ ಮೂಲಕ ಉಪವಾಸ ವ್ರತ ಮಾಡಲು ನಿಶ್ಚಯಿಸಿದ್ದರು.
ಸೆಪ್ಟೆಂಬರ್ 8ರಂದು ಪರಮಾತ್ಮನ ಅವತಾರದಲ್ಲಿ ಬಂದು ತಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ ಎಂದು ಕುಟುಂಬ ಶರೀರ ತ್ಯಾಗಕ್ಕೆ ಮುಂದಾಗಿತ್ತು. ಪುಣೆ ಹಾಗೂ ಉತ್ತರ ಪ್ರದೇಶ ಮೂಲದ ಭಕ್ತರೂ ಸಹ ಸೇರಿದಂತೆ ಒಟ್ಟು 21 ಜನರು ಶರೀರ ತ್ಯಾಗಕ್ಕೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಕಳೆದ ಆರು ವರ್ಷಗಳ ಹಿಂದೆ ತುಕಾರಾಮ ಈರಕರ ಮುಂಬೈನಲ್ಲಿ ಆಟೋ ಓಡಿಸುತ್ತ ಜೀವನ ಸಾಗಿಸುತ್ತಿದ್ದರು. ಈ ವೇಳೆ, ಒಂದು ದಿನ ಯುವತಿಯೋರ್ವಳು ಪುಸ್ತಕವೊಂದನ್ನು ತುಕಾರಾಮ ಅವರಿಗೆ ನೀಡಿದ್ದಳಂತೆ. ಬಳಿಕ ಆ ಪುಸ್ತಕದಲ್ಲಿನ ವಿಚಾರಗಳಿಂದ ಪ್ರೇರಿತರಾಗಿ, ಅದರಲ್ಲಿನ ಆಚರಣೆಗಳ ಮೊರೆ ಹೋಗಿ ಇಡೀ ಕುಟುಂಬದವರು ಆಶ್ರಮದ ಅನುಯಾಯಿಗಳಾಗಿದ್ದರು.
ಬಾಬಾನಿಂದ ಆನ್ಲೈನ್ ದೀಕ್ಷೆ ಪಡೆದು, ಮೂಲ ಸ್ಥಾನ ಹರಿಯಾಣಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಬಳಿಕ ಆಶ್ರಮದವರ ಚಿಂತನೆಗಳಿಂದ ಪ್ರಭಾವಿತರಾಗಿ ಈರಕರ ಕುಟುಂಬ ಸಮಾಜವೇ ಬೆಚ್ಚಿ ಬೀಳುವ ನಿರ್ಧಾರಕ್ಕೆ ಬಂದಿತ್ತು. ಇದೀಗ ಎಲ್ಲರ ಮನವೊಲಿಕೆ ಹಿನ್ನೆಲೆಯಲ್ಲಿ ತುಕಾರಾಮ ಈರಕರ ಕುಟುಂಬ ಜೀವಕ್ಕೆ ಯಾವುದೇ ಹಾನಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಈ ವಿಚಾರ ತಿಳಿದು, ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ, ಅಥಣಿ ತಹಸೀಲ್ದಾರ್ ಸಿದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ, ಸಿಪಿಐ ಸಂತೋಷ್ ಹಳ್ಳೂರ ಹಾಗೂ ಕವಲಗುಡ್ಡ ಆಶ್ರಮದ ಅಮರೇಶ್ವರ ಮಹಾರಾಜರು ಸ್ಥಳಕ್ಕಾಗಮಿಸಿ ಈರಕರ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಮ್ಮ ಆಚರಣೆ ಮೌಢ್ಯದಂತಿದೆ. ದೇಹ ತ್ಯಾಗದ ನಿರ್ಧಾರ ಸೂಕ್ತವಲ್ಲ, ಇದರಿಂದ ಈಗಲೇ ಹಿಂದೆ ಸರಿದು, ಸುಖವಾಗಿ ಬಾಳಿ ಎಂದು ಅಧಿಕಾರಿಗಳು ತಿಳಿ ಹೇಳಿದ್ದರು. ಅದರಂತೆಯೇ, ಈರಕರ ಕುಟುಂಬ ಸದಸ್ಯರಾದ ತುಕಾರಾಮ, ಹೆಂಡತಿ ಸಾವಿತ್ರಿ, ಮಗ ರಮೇಶ್ ಹಾಗೂ ಸೊಸೆ ವೈಷ್ಣವಿ ಇವರೆಲ್ಲ ಸೆಪ್ಟೆಂಬರ್ 8ರ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಆದರೂ ಈರಕರ ಕುಟುಂಬದ ಚಲನವಲನಗಳ ಮೇಲೆ ನಿಗಾ ಇಡಲು ಅಥಣಿ ಪೊಲೀಸ್ ಠಾಣೆಯಿಂದ ಓರ್ವ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಮನೆಯಲ್ಲಿ ಈ ಆಚರಣೆಗಾಗಿಯೇ ವಿಶೇಷ ಬೆಡ್, ಕುಡಿಯಲು ನೀರು ಹಾಗೂ ನಿರಂತರವಾಗಿ ತುಪ್ಪದ ದೀಪ ಉರಿಯುವಂತೆ ತುಕಾರಾಮ ಈರಕರ ಕುಟುಂಬ ನೋಡಿಕೊಳ್ಳುತ್ತಿರುವುದು ಕಂಡುಬಂದಿತ್ತು.
ಪ್ರತಿದಿನ ಮೂರು ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮನೆಯ ಪಡಸಾಲೆಯಲ್ಲಿ ಫೋಟೋ ಅಳವಡಿಸಿ ಪಕ್ಕದಲ್ಲಿ ಕುರ್ಚಿ ಇಟ್ಟು ಪೂಜಿಸುತ್ತಿರುವುದು ಬೆಳಕಿಗೆ ಬಂದಿದೆ. ತುಕಾರಾಮ ಈರಕರ ಈ ಕುರಿತು ಮಾತನಾಡಿ, ನಾವು ಪೂರ್ವ ನಿರ್ಧಾರಿತವಾಗಿದ್ದ ಸೆಪ್ಟೆಂಬರ್ 8ರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ. ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ, ನಾವು ಕೈಗೊಂಡ ನಿರ್ಧಾರ ಸೂಕ್ತವಲ್ಲ ಎಂದು ತಿಳಿಹೇಳಿದ್ದಾರೆ. ಹೀಗಾಗಿ, ನಾವು ಯಾವುದೇ ಶರೀರ ತ್ಯಾಗ ಮಾಡುವುದಿಲ್ಲ. ನಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದೇವೆ. ಅಧಿಕಾರಿಗಳ ಸೂಚನೆಯಂತೆ ಹೊರರಾಜ್ಯದ ಭಕ್ತರನ್ನು ಅವರ ಊರಿಗೆ ಕಳುಹಿಸಿದ್ದೇವೆ. ದಯವಿಟ್ಟು ನಮ್ಮ ಮನೆಗೆ ಬಂದು ಮಾನಸಿಕ ಹಿಂಸೆ ನೀಡಬೇಡಿ ಎಂದು ಮನವಿ ಮಾಡಿದರು.