ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜ.28ರಿಂದ ಆರಂಭವಾಗಿ ಏಪ್ರಿಲ್ 2ರವರೆಗೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿವೇಶನಕ್ಕೆ ಅನುಮೋದನೆ ನೀಡಿದ್ದು, ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಕೇಂದ್ರ ಬಜೆಟ್ ಅನ್ನು ಫೆ. 1ರಂದು ಮಂಡಿಸುವ ಪರಂಪರೆ ಇತ್ತೀಚಿನ ವರ್ಷಗಳಿಂದ ಮುಂದುವರಿದಿದೆ. ಈ ಬಾರಿ ಫೆ.1 ಭಾನುವಾರವಾಗಿರುವ ಹಿನ್ನೆಲೆಯಲ್ಲಿ, ದೇಶದ ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗಲಿದೆ. 2025–26ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಬಜೆಟ್‌ಗೆ ಪೂರ್ವಭಾವಿಯಾಗಿರುವ ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಬಿಡುಗಡೆ ಮಾಡಲಿದ್ದಾರೆ.ಬಜೆಟ್ ಅಧಿವೇಶನದ ಮೊದಲ ಹಂತ ಫೆ.13ರಂದು ಅಂತ್ಯಗೊಳ್ಳಲಿದ್ದು, ಎರಡನೇ ಹಂತ ಮಾರ್ಚ್ 9ರಂದು ಆರಂಭವಾಗಿ ಏಪ್ರಿಲ್ 2ರವರೆಗೆ ನಡೆಯಲಿದೆ. ಅಧಿವೇಶನದ ಮಧ್ಯಂತರ ಅವಧಿಯಲ್ಲಿ, ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಅನುದಾನ ಬೇಡಿಕೆಗಳನ್ನು ಸಂಬಂಧಿಸಿದ ಸ್ಥಾಯಿ ಸಮಿತಿಗಳು ಪರಿಶೀಲಿಸುವ ಅವಕಾಶ ದೊರೆಯಲಿದೆ.
































