ಪಣಜಿ : ಗೋವಾದ ಅರ್ಪೋರಾದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ ರೆಸ್ಟೋರೆಂಟ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಮಂದಿ ಸಜೀವ ದಹನವಾದ ದಾರುಣ ಘಟನೆ ಬಳಿಕ ದೊಡ್ಡ ಮಟ್ಟದ ಕ್ರಮ ಕೈಗೊಳ್ಳಲಾಗಿದೆ. ಲೂತ್ರಾ ಸಹೋದರರ ಒಡೆತನದ ಕಟ್ಟಡ ನೆಲಸಮ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ದುರಂತದ ಸುದ್ದಿ ಹೊರಬಂದ ತಕ್ಷಣ ಕ್ಲಬ್ ಮಾಲೀಕರಾದ ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ಥೈಲ್ಯಾಂಡ್ಗೆ ಪರಾರಿಯಾಗಿರುವ ಮಾಹಿತಿ ಹೊರಬಿದ್ದಿತ್ತು.
ಈ ಹಿನ್ನೆಲೆ ಸರ್ಕಾರದ ಆದೇಶದ ಮೇರೆಗೆ ಇಬ್ಬರು ಸಹೋದರರ ಒಡೆತನದ ಅಕ್ರಮ ನಿರ್ಮಾಣಗಳನ್ನು ನೆಲಸಮಗೊಳಿಸುವ ಕಾರ್ಯ ಪ್ರಾರಂಭವಾಗಿದೆ. ಸರ್ಕಾರದ ಭೂಮಿಯ ಮೇಲೆಯೇ ‘ಬಿರ್ಚ್ ಬೈ ರೋಮಿಯೋ ಲೇನ್’ ರೆಸ್ಟೋರೆಂಟ್ನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದುದೂ ತನಿಖೆಯಲ್ಲಿ ಬಹಿರಂಗವಾಗಿದೆ.
ಕಳೆದ ವಾರ ಬೆಂಕಿ ಅವಘಡದ ನಂತರ ಈ ಅಕ್ರಮಗಳ ಮಾಹಿತಿ ಬೆಳಕಿಗೆ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ, ವಾಗೇಟರ್ನಲ್ಲಿರುವ ಇವರ ಮತ್ತೊಂದು ಅಕ್ರಮ ನಿರ್ಮಾಣವಾದ ‘ರೋಮಿಯೋ ಲೇನ್’ ಬೀಚ್ ಶ್ಯಾಕ್ ಅನ್ನು ಕೆಡವಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಇದೇ ವೇಳೆ ಸೌರಭ್ ಮತ್ತು ಗೌರವ್ ಲೂತ್ರಾ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆಯನ್ನು ಮುಂದುವರಿಸುತ್ತಿರುವ ಗೋವಾ ಪೊಲೀಸರು, ಇಬ್ಬರಿಗೂ ಆಪ್ತನಾಗಿರುವ ದೆಹಲಿಯ ಅಜಯ್ ಗುಪ್ತಾ ಅವರನ್ನು ಬಂಧಿಸಿದ್ದಾರೆ. ಗೋವಾದ ಈ ಭೀಕರ ದುರಂತಕ್ಕೆ ಕಾರಣರಾದವರನ್ನು ಕಾನೂನಿನ ಮುಂದೆ ತರಲು ಸರ್ಕಾರ ಈಗ ಗಂಭೀರ ಕ್ರಮ ಕೈಗೊಂಡಿದ್ದು, ತನಿಖೆ ವೇಗ ಪಡೆದುಕೊಂಡಿದೆ.






























