ನವದೆಹಲಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶೀಯ ಹೂಡಿಕೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2024-25ರ ಏಪ್ರಿಲ್‌ನಿಂದ ಜನವರಿ ಅವಧಿಯಲ್ಲಿ ಭಾರತದಲ್ಲಿ ನಿವ್ವಳ ಎಫ್‌ಡಿಐ ಕೇವಲ 1.4 ಬಿಲಿಯನ್ ಡಾಲರ್ ಆಗಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ 2012-13 ರ ಅವಧಿಯಲ್ಲಿ ಇದು 19 ಬಿಲಿಯನ್ ಡಾಲರ್ ಆಗಿತ್ತು ಎಂದು ತಿಳಿಸಿದ್ದಾರೆ.
ಮೋದಿ ಸರ್ಕಾರ ದೇಶೀಯ ಹೂಡಿಕೆ (ಡಿಐ) ನಾಶಪಡಿಸುವುದರ ಜೊತೆಗೆ ಮತ್ತೊಂದು ರೀತಿಯ ಎಫ್‌ಡಿಐ (ಭಯ, ವಂಚನೆ ಮತ್ತು ಬೆದರಿಕೆ) ಅಭ್ಯಾಸದ ಮೂಲಕ ಎಫ್‌ಡಿಐ (ವಿದೇಶಿ ದೇಶೀಯ ಹೂಡಿಕೆ) ಯನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ. ನವರಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಮೋದಿ ಸರ್ಕಾರ ಈ ಸಾಧನೆ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಬೈಡನ್ ಅವಧಿಯಲ್ಲಿ, ಚೀನಾ ಹೊರತುಪಡಿಸಿ ಏಷ್ಯಾದ ಇತರೆ ದೇಶಗಳಲ್ಲಿ ಹೂಡಿಕೆ ಮಾಡಲು ಪ್ರಪಂಚದಾದ್ಯಂತದ ಕಂಪನಿಗಳು ಪರದಾಡುತ್ತಿದ್ದವು. ಭಾರತ ಸೊರಗುತ್ತಿದ್ದಾಗ ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶ ಶತಕೋಟಿ ಹೂಡಿಕೆಗಳನ್ನು ಪಡೆದವು ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.