ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಹತ್ವದ ಮಸೂದೆ ಮಂಡಿಸಲು ಮುಂದಾಗಿದ್ದು,ಇದೇ ಸೋಮವಾರ (ಆ.18) ರಂದು ಜೀವನ ನಿರ್ವಹಣೆ & ವ್ಯವಹಾರಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಸೂದೆಯ ಮಂಡನೆಗೆ ಮುಂದಾಗಿದ್ದು,ಸಣ್ಣ ಪ್ರಮಾಣದ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸುವಂತೆ ಮಾಡುವ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿದೆ.
ಹೌದು ಸಣ್ಣ ಪುಟ್ಟ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸಬಹುದಾದ ಕೆಲವು ನಿಬಂಧನೆಗಳನ್ನು ತೆಗೆದುಹಾಕಲು ಅಥವಾ ಅಪರಾಧಗಳ ಪಟ್ಟಿಯಿಂದ ಹೊರಗಿಡುವ ಉದ್ದೇಶ ಹೊಂದಿರುವ ‘ಜನ ವಿಶ್ವಾಸ (ತಿದ್ದುಪಡಿ) ಮಸೂದೆ-2025’ ಅನ್ನು ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ.
ಈ ಬಗ್ಗೆ ಲೋಕಸಭೆ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು ಈ ಪ್ರಕಾರವಾಗಿದೆ.ಜನರ ಜೀವನ ಮತ್ತು ವ್ಯವಹಾರಗಳನ್ನು ಸುಗಮಗೊಳಿಸುವ ಉದ್ದೇಶದಿಂದ, ಜೊತೆಗೆ ಆಡಳಿತದಲ್ಲಿ ವಿಶ್ವಾಸ ಹೆಚ್ಚಿಸುವ ಸಲುವಾಗಿ ಸಣ್ಣ ತಪ್ಪುಗಳನ್ನು ಅಪರಾಧ ಮುಕ್ತಗೊಳಿಸಲು,ತರ್ಕಬದ್ಧಗೊಳಿಸಲು ಕಾನೂನಿನಲ್ಲಿ ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಚಿವರು ಮಂಡಿಸಲಿದ್ದಾರೆ ಎನ್ನಲಾಗಿದೆ.
ಈ ಉದ್ದೇಶದಿಂದಾಗಿ ಬಹುತೇಕ 350ಕ್ಕೂ ಹೆಚ್ಚು ನಿಬಂಧನೆಗಳಿಗೆ ತಿದ್ದುಪಡಿ ತರಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಭಾರತದಾದ್ಯಂತ ವಾಣಿಜ್ಯ ಚಟುವಟಿಕೆಗಳನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಈ ಮಸೂದೆ ಉದ್ದೇಶ ಹೊಂದಿದೆ, ಹೀಗಾಗಿ ಜನರ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುವುದು ಮತ್ತು ಜನಸ್ನೇಹಿ ಪರಿಸರ ಸೃಷ್ಟಿಸುವುದು ಈ ಕ್ರಮದ ಉದ್ದೇಶ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.