ಕೊಚ್ಚಿ: ಕೊಚ್ಚಿಯಲ್ಲಿರುವ ಜವಾಹರ್ಲಾಲ್ ನೆಹರು ಸ್ಟೇಡಿಯಂನಲ್ಲಿ ನಿರ್ಮಿಸಲಾದ 20 ಅಡಿ ಎತ್ತರದ ಗ್ಯಾಲರಿಯಿಂದ ಕಾಂಗ್ರೆಸ್ ನ ತೃಕ್ಕಾಕರ ಶಾಸಕಿ ಉಮಾ ಥಾಮಸ್ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಕಲೂರ್ ಕ್ರೀಡಾಂಗಣದಲ್ಲಿ ನಟಿ ದಿವ್ಯಾ ಉನ್ನಿ ನೇತೃತ್ವದ 12,000 ನೃತ್ಯಗಾರರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಸಕಿ ಉಮಾ ಥಾಮಸ್ ಅವರೂ ಆಗಮಿಸಿದ್ದರು ಈ ವೇಳೆ ಕಾರ್ಯಕ್ರಮ ಆಯೋಜಕರು ಗಣ್ಯರನ್ನು ವಿಐಪಿ ಗ್ಯಾಲರಿಗೆ ಆಹ್ವಾನಿಸಿದ್ದಾರೆ ಹಾಗೆ ವೇದಿಕೆ ಮೇಲೆ ಬಂದ ಶಾಸಕಿ ಆಸನದಲ್ಲಿ ಕುಳಿತುಕೊಳ್ಳುವ ವೇಳೆ ಕಾಲು ಎಡವಿ ವೇದಿಕೆ ಮೇಲಿಂದ 20 ಅಡಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಆಸ್ಪತ್ರೆ ಮೂಲಗಳ ಪ್ರಕಾರ ಉಮಾ ಥಾಮಸ್ ಅವರ ಮೆದುಳು, ಶ್ವಾಸಕೋಶಗಳು ಮತ್ತು ಬೆನ್ನುಮೂಳೆಗೆ ತೀವ್ರವಾದ ಗಾಯಗಳಾಗಿದೆ ಎಂದು ಹೇಳಿದ್ದಾರೆ. ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಐಪಿ ಗ್ಯಾಲರಿಯನ್ನು 20 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದು ಇದಕ್ಕೆ ಯಾವುದೇ ತಡೆ ಬೇಲಿ ನಿರ್ಮಿಸಲಾಗಿಲ್ಲ ಅಲ್ಲದೆ ವೇದಿಕೆಯ ಅಂಚಿನ ಭಾಗಕ್ಕೆ ತಡೆಗೆಂದು ರಿಬ್ಬನ್ ಕಟ್ಟಲಾಗಿದೆ ಆದರೆ ಶಾಸಕಿ ಎಡವಿ ಬೀಳುವ ವೇಳೆ ರಿಬ್ಬನ್ ಕಟ್ಟಿದ ಕಂಬ ಸಮೇತ ಕೆಳಗೆ ಬಿದ್ದಿದೆ, ಅಷ್ಟು ಮಾತ್ರವಲ್ಲದೆ ವೇದಿಕೆ ಮೇಲೆ ನಡೆದುಕೊಂಡು ಹೋಗಲು ಹೆಚ್ಚಿನ ಜಾಗದ ವ್ಯವಸ್ಥೆ ಕೂಡಾ ಇರಲಿಲ್ಲ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಹರಿದಾಡುತ್ತಿದ್ದು ಕಾರ್ಯಕ್ರಮ ಆಯೋಜಕರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಆಸ್ಪತ್ರೆ ವೈದ್ಯರ ಮಾಹಿತಿ ಪ್ರಕಾರ ಉಮಾ ಥಾಮಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ, ಜನರನ್ನು ಗುರುತು ಹಿಡಿಯುತ್ತಿದ್ದಾರೆ ಜೊತೆಗೆ ನಮ್ಮ ಮಾತಿಗೆ ಪ್ರತಿಕ್ರಿಯೆ ನೀಡಲು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.