ಬೆಂಗಳೂರು : ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ಈ ಸರಕಾರ ತಂದು ನಿಲ್ಲಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರು ನಾಳೆಯಿಂದ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.ಸಾರಿಗೆ ಇಲಾಖೆ ನೌಕರರ ಜೊತೆಗೆ ಬಿಜೆಪಿ ನಿಲ್ಲಲಿದೆ. ಸಾರಿಗೆ ಇಲಾಖೆ ಸಚಿವರಿಗೆ ತನ್ನ ಇಲಾಖೆಯ ಆರ್ಥಿಕ ಸ್ಥಿತಿಗತಿಯೇನೆಂದು ಅರ್ಥವಾಗಿಲ್ಲದೇ ಇರುವುದು ದುರಂತ ಎಂದು ಟೀಕಿಸಿದರು.
ಸಚಿವ ರಾಮಲಿಂಗಾರೆಡ್ಡಿಯವರು ಇಲಾಖೆ ಲಾಭದಲ್ಲಿದೆ ಎನ್ನುತ್ತಾರೆ. ಸಚಿವರೇ ಇಷ್ಟು ಅಜ್ಞಾನಿಗಳಾದರೆ ಇನ್ನು ಜನಸಾಮಾನ್ಯರ ಪಾಡೇನು; ಇದು ರಾಜ್ಯದ ದುರ್ದೈವ ಎಂದು ವ್ಯಂಗ್ಯವಾಡಿದರು.
ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರು ಬಿಎಂಟಿಸಿಯ ಎಂ.ಡಿ. ಆಗಿದ್ದಾಗ ಆ ಸಂಸ್ಥೆಯನ್ನು ನಷ್ಟದಿಂದ ಲಾಭಕ್ಕೆ ತಂದರು. ಇಲಾಖೆಗೆ ಬಹಳಷ್ಟು ಆಸ್ತಿಯನ್ನೂ ಮಾಡಿದ್ದರು ಎಂದು ವಿವರಿಸಿದರು.
700 ಕೋಟಿ ಮೊತ್ತವನ್ನು ಠೇವಣಿ ಇಟ್ಟಿದ್ದರು ಎಂದರು.ಸರಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ಆಸ್ತಿಯನ್ನು ಮಾರಾಟ ಮಾಡಲು ಈ ಸರಕಾರ ಹೊರಟಿದೆ. ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಸಿದ್ದರಾಮಯ್ಯನವರು ಜಾತ್ರೆ ಮಾಡುತ್ತಲೇ ಇದ್ದಾರೆ..
ಡಿಸೆಂಬರ್ ಅಂತ್ಯಕ್ಕೆ ಅಂದರೆ ಇಂದಿನವರೆಗೆ ಸಾರಿಗೆ ಇಲಾಖೆಗೆ ಈ ಸರಕಾರವು 7,401 ಕೋಟಿ ಕೊಡಬೇಕಿದೆ. ಭವಿಷ್ಯನಿಧಿ ನ್ಯಾಸ ಮಂಡಳಿಗೆ 2,500 ಕೋಟಿ, ನಿವೃತ್ತ ನೌಕರರ ಬಾಕಿ 362 ಕೋಟಿ, ಸಿಬ್ಬಂದಿಗಳ ಬಾಕಿ ಪಾವತಿ, ಸರಬರಾಜುದಾರರ ಬಿಲ್ ಪಾವತಿ, ಇಂಧನ ಬಾಕಿ ಸೇರಿ 1,000 ಕೋಟಿ, ಎಂವಿಸಿ ಕ್ಲೈಮ್‍ಗಳು, ಇತರ ಬಿಲ್‍ಗಳು, ನಿವೃತ್ತ ನೌಕರರ ಪರಿಷ್ಕಂತ ಉಪ ಧನ, ರಜೆ ನಗದೀಕರಣ- 700 ಕೋಟಿ, ಒಟ್ಟು ಸಾಲದ ಬಾಕಿ ಹೊಣೆಗಾರಿಕೆ ಸೇರಿದಾಗ 5,614 ಕೋಟಿ ಆಗುತ್ತದೆ ಎಂದು ಪಿ. ರಾಜೀವ್ ಅವರು ವಿವರ ನೀಡಿದರು.