ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್ ಸೇತುವೆ ಇಂದು ಸಿಗಂದೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಶರಾವತಿ ಹಿನ್ನೀರಿಗೆ ನಿರ್ಮಿಸಿದ ಈ ಕೇಬಲ್ ಬ್ರಿಜ್ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸಲಿದ್ದಾರೆ. ಈ ಮೂಲಕ ಶರಾವತಿ ನದಿ ದಡದ ಜನರ 6 ದಶಕಗಳ ಕನಸು ನನಸಾಗುತ್ತಿದೆ.
ಗುಜರಾತ್‌ನ ಓಖಾದಿಂದ ಬೇಯ್ ದ್ವಾರಕೆ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತುವೆ ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ ಎಂಬ ಹಿರಿಮೆ ಹೊಂದಿದೆ. ಸುದರ್ಶನ ಸೇತುವೆಯನ್ನು 2024ರಲ್ಲಿ ಉದ್ಘಾಟಿಸಲಾಗಿತ್ತು. 2.32 ಕಿ.ಮೀ. ಇರುವ ಈ ಸೇತುವೆ ಚತುಷ್ಪಥ ರಸ್ತೆ ಹೊಂದಿದೆ.
ಸಿಗಂದೂರು ಸೇತುವೆ 2.44 ಕಿ.ಮೀ. ಉದ್ದವಿದೆ. ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ ಇದೆ. 30ರಿಂದ 55 ಮೀಟರ್ ಎತ್ತರದ 17 ಪಿಲ್ಲರ್‌ಗಳಿವೆ. ಇದು ದ್ವಿಪಥ ಹೊಂದಿದ್ದು, 2 ಕಡೆ 1.5 ಮೀಟರ್ ಅಗಲದ ಫೂಟ್‌ಪಾತ್ ಕೂಡ ಇದೆ. ಸೇತುವೆ ನಿರ್ಮಾಣಕ್ಕೆ 423.15 ಕೋಟಿ ರೂ. ವೆಚ್ಚವಾಗಿದೆ. ಗೋವಾದಲ್ಲಿ ಜೇರಿ ನದಿಗೆ ನಿರ್ಮಿಸಿರುವ 680 ಮೀ ಉದ್ದದ ಸೇತುವೆ ದೇಶದ 2ನೇ ಅತಿ ಉದ್ದದ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ಈ ಖ್ಯಾತಿ ಸಿಗಂದೂರು ಸೇತುವೆಗೆ ಲಭಿಸಲಿದೆ.
ಸಿಗಂದೂರು ಸೇತುವೆ ಕಾಮಗಾರಿಗೆ 2018ರ ಫೆ.19ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. 2019ರ ಡಿಸೆಂಬರ್‌ನಿಂದ ಕಾಮಗಾರಿ ಆರಂಭಗೊಂಡಿತ್ತು. ಇಂದು ಅವರೇ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
70ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಟಣೆಕಟ್ಟು ನಿರ್ಮಾಣವಾದಾಗ ಅದರ ಹಿನ್ನೀರಿನಿಂದ ಸಾಗರ ತಾಲೂಕಿನ ಶರಾವತಿ ಕಣಿವೆ ಎರಡು ಭಾಗವಾಗಿ ವಿಭಜನೆಯಾಯಿತು. ಇದರಿಂದ ನದಿಯ ಒಂದು ಭಾಗದಲ್ಲಿ ಉಳಿದವರು ಮೂಲಸೌಕರ್ಯಗಳಿಂದ ವಂಚಿತರಾಗಿ ಬದುಕುವಂತಾಗಿತ್ತು. ಅಲ್ಲಿನ ಜನ 2 ಕಿಮೀ ಅಂತರದ ನದಿ ದಾಟಲು ವ್ಯವಸ್ಥೆ ಇಲ್ಲದೆ ಸಾಗರ ತಾಲೂಕು ಕೇಂದ್ರವನ್ನು ತಲುಪಬೇಕಾದರೆ ಸುಮಾರು 80ರಿಂದ 100 ಕಿ.ಮೀ. ರಸ್ತೆ ಮಾರ್ಗದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸಮಸ್ಯೆ ಬಗೆಹರಿಸಲು ಅಂಬಾರಗೊಡ್ಲು–ಕಳ್ಳಸವಳ್ಳಿ ದಡಕ್ಕೆ ಲಾಂಚ್ ವ್ಯವಸ್ಥೆ ಮಾಡಲಾಯಿತು. ಸಂಜೆ 6 ಗಂಟೆ ಬಳಿಕ ಲಾಂಚ್ ಸ್ಥಗಿತಗೊಳಿಸಲಾಗುತ್ತಿತ್ತು. ಈ ಸಮಯದಲ್ಲಿ ಶರಾವತಿ ಹಿನ್ನೀರಿನ ದಡದ ತುಮರಿ ಭಾಗದ ಜನರಿಗೆ ಏನಾದರೂ ಆರೋಗ್ಯ ಸಮಸ್ಯೆ, ಅಪಘಾತ ಆದರೆ ನಿಟ್ಟೂರು ಮೂಲಕ ಹೊಸನಗರ, ಶಿವಮೊಗ್ಗ ಅಥವಾ ಕೊಲ್ಲೂರು, ಕುಂದಾಪುರ ಇಲ್ಲವೇ ಕೋಗಾರು ಘಾಟಿ ಬಳಸಿ ಸಾಗರ, ಭಟ್ಕಳ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತುಂಬ ವಿಳಂಬವಾಗಿ ಎಷ್ಟೋ ರೋಗಿಗಳು, ಅಪಘಾತದಲ್ಲಿ ಗಾಯಗೊಂಡವರು ಮೃತಪಟ್ಟ ಉದಾಹರಣೆ ಇದೆ. ಇದೇ ಕಾರಣಕ್ಕೆ ಶರಾವತಿ ನದಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿತ್ತು. ಇದಕ್ಕೆ ಹಲವಾರು ಹೋರಾಟಗಳು ಸಹ ನಡೆದಿದ್ದವು. ಇದೆಲ್ಲದರ ಫಲವಾಗಿ ಈ ದಿನ ಸೇತುವೆ ತಲೆ ಎತ್ತಿ ನಿಂತಿದೆ.
ಸೇತುವೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಸಿಗಂದೂರು ಸೇತುವೆ ರಾಷ್ಟ್ರೀಯ ಹೆದ್ದಾರಿ 17 ಮತ್ತು 206ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಸುಮಾರು 25 ಕಿ.ಮೀ.ನಷ್ಟು ದೂರ ಕಡಿಮೆಯಾಗುತ್ತದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ತೆರಳುವ ಭಕ್ತರಿಗೂ ಅನುಕೂಲವಾಗಲಿದೆ. ಶಿವಮೊಗ್ಗ, ಸಾಗರ ಮತ್ತು ಭಟ್ಕಳ, ಬೈಂದೂರು, ಕೊಲ್ಲೂರಿನ ದೂರವನ್ನು ಕಡಿತಗೊಳಿಸುತ್ತದೆ.