ಬೆಂಗಳೂರು : ಜಮಾತ್ ಉಲ್ ಉಗ್ರ ಸಂಘಟನೆಯ ಕೃತ್ಯಗಳಿಗೆ ಭಾರತದಲ್ಲಿ ಉತ್ತೇಜನ ನೀಡಿದ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಾಂಗ್ಲಾದೇಶದ ಪ್ರಜೆ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂಬಾತನ ವಿರುದ್ಧ ಡಕಾಯಿತಿ, ಪಿತೂರಿ, ಭಯೋತ್ಪಾದನೆಗೆ ನಿಧಿ ಸಂಗ್ರಹ ಮತ್ತು ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಕೋರ್ಟ್ 57,000 ರೂ. ದಂಡ ವಿಧಿಸಿದೆ.
ಬುರ್ದ್ವಾನ್ ಸ್ಫೋಟ ಪ್ರಕರಣದ ತನಿಖೆಯ ಸಮಯದಲ್ಲಿ ಏಜೆನ್ಸಿಯ ಕೋಲ್ಕತ್ತಾ ಶಾಖೆಯ ಕಚೇರಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇರೆಗೆ 2019 ರ ಜೂನ್‌ನಲ್ಲಿ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಜಹಿದುಲ್ ನಿಗೆ ಶಿಕ್ಷೆಯಾಗುವ ಮೂಲಕ ಈ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆಯಾದಂತಾಗಿದೆ.
ಎನ್‌ಐಎ ತನಿಖೆಯಲ್ಲಿ ದೊರೆತ ಮಾಹಿತಿಯ ಅನುಸಾರ, 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರ ವಶದಲ್ಲಿದ್ದ ಜಾಹಿದುಲ್, 2014ರಲ್ಲಿ ಜೆಎಂಬಿ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ. ಅದೇ ವೇಳೆಯಲ್ಲಿ ಆತ 2014 ರ ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ.
ಬುರ್ದ್ವಾನ್ ಸ್ಫೋಟದ ಬಳಿಕ, ಜಾಹಿದುಲ್ ಮತ್ತು ಸಹಚರರು ಬೆಂಗಳೂರಿಗೆ ಪರಾರಿಯಾಗಿದ್ದರು. ಬಳಿಕ ಇವರು ಬೆಂಗಳೂರಿನಲ್ಲಿದ್ದುಕೊಂಡೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮುಸ್ಲಿಂ ಯುವಕರಿಗೆ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವಂತೆ ಉತ್ತೇಜನ ನೀಡುತ್ತಿದ್ದರು.