ಉಡುಪಿ: ಯಕ್ಷಗಾನವನ್ನು ಆರಾಧನಾ ಕಲೆ ಎಂದು ಕರೆಯುತ್ತಾರೆ. ಇಂತಹ ವಿಶಿಷ್ಟ ಕಲೆಯಲ್ಲಿ ಕೆಲವೊಮ್ಮೆ ಕಲಾವಿದರು ಮಾಡುವ ಅದ್ವಾನಗಳಿಂದ ಪ್ರೇಕ್ಷಕರಿಗೂ, ಭಕ್ತರಿಗೂ ಘಾಸಿಯಾಗುತ್ತದೆ. ಕಲಾವಿದನೊಬ್ಬನ ಅತಿರೇಕದ ಪ್ರದರ್ಶನದಿಂದ ನೋಡುಗರಿಗೆ ಆಘಾತವಾದ ವಿಡಿಯೋ ಒಂದು ಸದ್ಯ ವೈರಲಾಗುತ್ತಿದೆ.
ದೇವಿ ಮಹಾತ್ಮ ಪ್ರಸಂಗವನ್ನು ಅತ್ಯಂತ ಶೃದ್ಧೆ, ಭಕ್ತಿಗಳಿಂದ ಭಕ್ತರು ಆಯೋಜಿಸುತ್ತಾರೆ. ಹರಕೆ ಹೊತ್ತು ಸಸ್ಯಹಾರಿಗಳಾಗಿ ಮನೆಯಲ್ಲಿ ಪೂಜೆ, ಅನ್ನ ಸಂತರ್ಪಣೆ ನಡೆಸಿ ಯಕ್ಷಗಾನ ಏರ್ಪಡಿಸುತ್ತಾರೆ. ದೇವಿ ಮಹಾತ್ಮ ಪ್ರಸಂಗದ ವೇಳೆ ಉಯ್ಯಾಲೆಯಲ್ಲಿ ತಾಯಿ ತೂಗುವುದನ್ನು ಕಂಡು ಭಾವುಕರಾಗುತ್ತಾರೆ .
ಇಂತಹ ಅಪರೂಪದ ಸನ್ನಿವೇಶದಲ್ಲಿ ದೇವಿಯ ಪಾತ್ರ ಧರಿಸಿದ ಕಲಾವಿದರೊಬ್ಬರು, ಅತಿ ವೇಗದಿಂದ ದೇವಿಯ ತೊಟ್ಟಿಲು ತೂಗಿದ ಕಾರಣ, ಅದು ತುಂಡಾಗಿ ಭೂಮಿಗೆ ಕುಸಿದು ಬಿದ್ದಿದೆ. ಆಯೋಜಕರು ಮಾತ್ರವಲ್ಲ ನೋಡಿಗರಿಗೂ ಇದರಿಂದ ಬೇಸರವಾಗಿದೆ. ದೇವರಿಗೆ ಹರಕೆ ಹೊತ್ತು ಯಕ್ಷಗಾನ ಆಡಿಸುವ ಪ್ರತೀತಿಯಿದೆ.
ಆರಾಧಕರು ಅದೆಷ್ಟು ಯಕ್ಷಗಾನವನ್ನು ಪ್ರೀತಿಸುತ್ತಾರೆ ಎಂದರೆ ಕೆಲ ದೇವಾಲಯಗಳಲ್ಲಿ ಮುಂದಿನ 20 ವರ್ಷಗಳ ಕಾಲಕ್ಕೆ ಯಕ್ಷಗಾನ ಬುಕಿಂಗ್ ಆಗಿರುತ್ತದೆ. ಕಲೆಯನ್ನು ಇಷ್ಟೊಂದು ಪ್ರೀತಿಸುವ ಜನರು ಇರುವಾಗ ಕಲಾವಿದರು ಕೂಡ ಉದ್ವೇಗ, ಅತಿರೇಕಗಳಿಗೆ ಒಳಗಾಗದೆ ಪ್ರದರ್ಶನದ ಗುಣಮಟ್ಟಕ್ಕೆ ಒತ್ತು ನೀಡಿ ಕಾರ್ಯಕ್ರಮ ನೀಡಬೇಕು ಎಂದು ಪ್ರೇಕ್ಷಕರು ಒತ್ತಾಯಿಸಿದ್ದಾರೆ.


































