ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಉಳಿದ ಐವರ ವಿರುದ್ಧದ ಹಣ ವರ್ಗಾವಣೆ ಆರೋಪವನ್ನು ಪರಿಗಣಿಸಬೇಕೆ ಎಂಬ ಕುರಿತು ದೆಹಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.
ಜುಲೈ 29ರಂದು ಆದೇಶ ಪ್ರಕಟಿಸುವುದಾಗಿ ರೋಸ್ ಅವೆನ್ಯೂ ಕೋರ್ಟ್ ಸಂಕೀರ್ಣದಲ್ಲಿನ ಭ್ರಷ್ಟಾಚಾರ ತಡೆ ಕಾಯ್ದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ. ಗಾಂಧಿ ಕುಟುಂಬದವರಲ್ಲದೇ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಸುನಿಲ್ ಭಂಡಾರಿ ಹಾಗೂ ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಕೂಡ ಜಾರಿ ನಿರ್ದೇಶನಾಲಯ ಈ ಪ್ರಕರಣದ ಆರೋಪಿಗಳನ್ನಾಗಿ ಹೆಸರಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಕಾಂಗ್ರೆಸ್ 90 ಕೋಟಿ ರೂ.ನಷ್ಟು ಸಾಲ ನೀಡಿತ್ತು. ಯಂಗ್ ಇಂಡಿಯನ್ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ 50 ಲಕ್ಷ ಹಣ ನೀಡಿ ಎಜೆಎಲ್ ಕಾಂಗ್ರೆಸ್‌ಗೆ ನೀಡಬೇಕಿದ್ದ 90 ಕೋಟಿ ರೂ.ನಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು.
ಆ ಮೂಲಕ ಸುಮಾರು 2,000 ಕೋಟಿ ರೂ.ಗಿಂತಗೂ ಅಧಿಕ ಮಾರುಕಟ್ಟೆ ಮೌಲ್ಯದ ಆಸ್ತಿಯನ್ನು ಯಂಗ್ ಇಂಡಿಯನ್ ಸಂಸ್ಥೆಯು ತನ್ನ ವಶಕ್ಕೆ ಪಡೆಯಲು ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರುಗಳ ಮೌಲ್ಯ, ಎಜೆಎಲ್‌ನ ಸ್ಥಿರ ಆಸ್ತಿಗಳು ಮತ್ತು ಅವುಗಳಿಂದ ದೊರೆಯುವ ಬಾಡಿಗೆಯನ್ನು ಅಪರಾಧದ ಗಳಿಕೆ ಎಂದು ಇಡಿ ದೂರಿತ್ತು. ಆದ್ರೆ ಆಸ್ತಿಯನ್ನ ಬಳಸದಿದ್ದರೂ ಅಥವಾ ಅಂದಾಜಿಸದಿದ್ದರೂ ಹಣ ವರ್ಗಾವಣೆ ಆರೋಪ ಮಾಡಿರುವುದು ವಿಚಿತ್ರ ಮತ್ತು ಹಿಂದೆAದೂ ಕೇಳರಿಯದ ಪ್ರಕರಣ ಎಂದು ಗಾಂಧಿ ಕುಟುಂಬ ಪರ ವಕೀಲರು ವಾದ ಮಂಡಿಸಿದ್ದರು.