ನವದೆಹಲಿ: ಸದ್ಯ ಕುತೂಹಲ ಕೆರಳಿಸಿರುವ ದೆಹಲಿ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾಗಿದ್ದು, ಇಂದು ಸಂಜೆ 5ರ ಬಳಿಕ ಮನೆ ಮನೆ ಪ್ರಚಾರ ಶುರುವಾಗಲಿದೆ. ಇನ್ನು ಫೆ. 5ರಂದು ಮತದಾನ ನಡೆಯಲಿದೆ. ಅಂತಿಮ ಪ್ರಚಾರದ ದಿನವಾದ ಸೋಮವಾರ ದೆಹಲಿಯಲ್ಲಿ ಬಿಜೆಪಿ 22 ರೋಡ್ ಶೋ ಮತ್ತು ರ್‍ಯಾಲಿಗಳನ್ನು ಏರ್ಪಡಿಸಿದ್ದು, ಕಡೆಯ ಹಂತದಲ್ಲಿ ಮತದಾರರ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ.
ಅತ್ತ ಆಮ್ ಆದ್ಮಿ ಪಕ್ಷ ಕೂಡ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಭರವಸೆಯಿಂದ ಚುನಾವಣಾ ಪ್ರಚಾರ ಮುಂದುವರೆಸಿದೆ. ಕಾಂಗ್ರೆಸ್ ಕೂಡ ಹಿಂದೆ ಬೀಳದಂತೆ ಎಲೆಕ್ಷನ್ ಸಮರದಲ್ಲಿ ಭಾಗವಹಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಎಲ್ಲಾ ಸಾರ್ವಜನಿಕ ಸಭೆಗಳು, ಚುನಾವಣಾ ಸಂಬಂಧಿತ ಕಾರ್ಯಗಳು ಮತ್ತು ಪ್ರಚಾರವನ್ನು ಮತದಾನಕ್ಕೆ 48 ಗಂಟೆಗಳ ಮುನ್ನವೇ ನಿಲ್ಲಿಸಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈಗಾಗಲೇ ಹಲವು ಮಾತಿನ ಯುದ್ಧ, ಆರೋಪ- ಪ್ರತ್ಯಾರೋಪಗಳ ಮೂಲಕ ಮತದಾರರ ಗಮನ ಸೆಳೆದಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳು ಹಲವು ಭರ್ಜರಿ ಘೋಷಣೆ ಮತ್ತು ಭರವಸೆಗಳನ್ನು ನೀಡಿದ್ದಾರೆ.
ದೆಹಲಿ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿರುವ ದತ್ತಾಂಶದ ಪ್ರಕಾರ, ಫೆ 5ರಂದು 13,766 ಮತಗಟ್ಟೆಗಳಲ್ಲಿ 1.56 ಕೋಟಿ ಜನರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 83.76 ಲಕ್ಷ ಪುರುಷರಾದರೆ, 72.36 ಮಹಿಳಾ ಮತದಾರರಿದ್ದಾರೆ. 1,267 ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸರಾಗ ಮತದಾನ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, 733 ಮತಗಟ್ಟೆಗಳನ್ನು ವಿಕಲಚೇತನರಿಗೆ ವಿನ್ಯಾಸ ಮಾಡಲಾಗಿದೆ.