ಉಡುಪಿ : ಸಣ್ಣ ಪುಟ್ಟ ಭಿನ್ನಾಬಿಪ್ರಾಯದಿಂದ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮದುವೆಯಾಗಿ ಹೊಂದಾಣಿಕೆಯ ಬಾಳು ಬದುಕಬೇಕಾದ ಅನೇಕರು ಈ ರೀತಿ ವಿಚ್ಛೇದನಕ್ಕಾಗಿ ನ್ಯಾಯಾಲಯ ಅಲೆದಾಡುತ್ತಿದ್ದಾರೆ. ಈ ರೀತಿ ಉಡುಪಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಮೂರು ಜೋಡಿಯನ್ನು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಮತ್ತೆ ಒಂದು ಮಾಡಲಾಗಿದೆ. ಇದೊಂದು ಅಪರೂಪದ ಕ್ಷಣವಾಗಿದ್ದು, ನ್ಯಾಯಾದೀಶರುಗಳು ಈ ಜೋಡಿಗಳ ಮನ ಒಲಿಸಿ ಮತ್ತೆ ಒಂದಾಗಿ ಬಾಳುವಂತೆ ಮಾಡಿದ್ದಾರೆ.
ಉಡುಪಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ , ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಅವರ ನೇತೃತ್ವದಲ್ಲಿ ಜೋಡಿಗಳು ಮತ್ತೆ ಒಂದಾಗಿದ್ದಾರೆ. ಒಂದು ಜೋಡಿ 2011 ರಲ್ಲಿ ಬೇರೆಯಾಗಿದ್ದರೆ, ಮತ್ತೊಂದು ಜೋಡಿ 2019 ರಲ್ಲಿ ಹಾಗೂ ಇನ್ನೊಂದು ಜೋಡಿ 2021 ರಲ್ಲಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಮೂರು ಜೋಡಿಗಳ ಮನವೊಲಿಸಿ ಜೀವನದ ಪಾಠ ಮಾಡುವ ಮೂಲಕ ನ್ಯಾಯಾಧೀಶರು ಮತ್ತೆ ಒಂದಾಗುವಂತೆ ಮನ ಒಲಿಸಿದ್ದಾರೆ. ಸುಖ ಜೀವನಕ್ಕೆ ಹೇಗೆ ಹೊಂದಿಕೊಂಡು ಬದುಕಬೇಕು , ಸಣ್ಣ ಪುಟ್ಟ ವಿಚಾರಗಳನ್ನು ಹೇಗೆ ತಮ್ಮಲ್ಲಿ ಬಗೆ ಹರಿಸಿಕೊಳ್ಳಬೇಕು ಎಂಬ ಸಲಹೆಯನ್ನು ಜೋಡಿಗಳಿಗೆ ನೀಡಲಾಗಿತ್ತು. ಸಲಹೆಯನ್ನು ಒಪ್ಪಿಕೊಂಡು ಮತ್ತೆ ಒಂದಾಗಲು ಒಪ್ಪಿದ ಜೋಡಿಗಳಿಗೆ ನ್ಯಾಯಾಲಯದಲ್ಲೇ ಮರು ಮದುವೆ ಕೂಡಾ ಮಾಡಿಸಲಾಯಿತು.