ಪುಣೆಯಲ್ಲಿ ಶಂಕಿತ GB ಸಿಂಡ್ರೋಮ್‌ಗೆ ಮೊದಲ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಚೀನಾ ವೈರಸ್ ಕೋವಿಡ್ ಹಾವಳಿ ಇನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ.. ಅದಾಗಲೇ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಆಗಾಗ ಸುದ್ದಿಯಾಗುತ್ತಿವೆ. ಎಂಪಾಕ್ಸ್, ಹೆಚ್ ಎಂಪಿವಿ ವೈರಸ್ ಗಳ ಸುದ್ದಿ ಹಸಿರಾಗಿರುವಂತೆಯೇ ಇತ್ತ ಪುಣೆಯಲ್ಲಿ ಶಂಕಿತ GB ಸಿಂಡ್ರೋಮ್‌ಗೆ ಮೊದಲ ಬಲಿಯಾಗಿದೆ. ಅಂತೆಯೇ ಈ ಜಿಬಿ ಸಿಂಡ್ರೋಮ್ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.
ಶಂಕಿತ ‘ಗಿಲ್ಲೈನ್ ಬರ್ರೆ ಸಿಂಡ್ರೋಮ್’ಗೆ (ಜಿಬಿಎಸ್) ಒಳಗಾಗಿದ್ದ ವ್ಯಕ್ತಿಯೊಬ್ಬರು ಸೋಲಾಪುರದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಸೋಮವಾರ ತಿಳಿಸಿದ್ದಾರೆ. ಇದು ಶಂಕಿತ ಜಿಬಿಎಸ್‌ನಿಂದ ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂತೆಯೇ ಪುಣೆಯಲ್ಲಿ ಶಂಕಿತ ಜಿಬಿಎಸ್ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಜಿಬಿಎಸ್ ಎಂಬುದು, ರೋಗಿಯ ಪ್ರತಿಕಾಯ ಸಾಮರ್ಥ್ಯವನ್ನು ಕುಗ್ಗಿಸುವ ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕಿನಿಂದ ಬರುವ ನರ ಸಂಬಂಧಿ ಅನಾರೋಗ್ಯವಾಗಿದೆ. ಇದು ಅಪರೂಪದ ಕಾಯಿಲೆಯಾಗಿದ್ದು, ದೇಹವು ಹಠಾತ್ತನೆ ಮರಗಟ್ಟುವಂತೆ ಮಾಡಿ, ಕೈ–ಕಾಲು ಹಾಗೂ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಮೂಲಗಳ ಪ್ರಕಾರ ಜನವರಿ 9 ರಂದು ಆಸ್ಪತ್ರೆಗೆ ದಾಖಲಾದ ರೋಗಿಯನ್ನು ಪುಣೆ ಕ್ಲಸ್ಟರ್‌ನಲ್ಲಿ ಮೊದಲ ಜಿಬಿಎಸ್ ಪ್ರಕರಣ ಎಂದು ಶಂಕಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳಿಂದ ಪಡೆದ ಕೆಲವು ಜೈವಿಕ ಮಾದರಿಗಳಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಇರುವುದು ಪರೀಕ್ಷೆಗಳಲ್ಲಿ ಕಂಡುಬಂದಿದೆ. ಸಿ ಜೆಜುನಿ ವಿಶ್ವಾದ್ಯಂತದ ಎಲ್ಲಾ ಜಿಬಿಎಸ್ ಪ್ರಕರಣಗಳಲ್ಲಿ ಮೂರನೇ ಒಂದು ಭಾಗಕ್ಕೆ ಕಾರಣವಾಗಿದೆ ಮತ್ತು ಅತ್ಯಂತ ತೀವ್ರವಾದ ಸೋಂಕುಗಳಿಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೀರಿನ ಮೂಲಗಳಿಂದ ಸೋಂಕು ಹರಡಿರುವ ಶಂಕೆ
ಇನ್ನು ಪುಣೆಯ ಜಲ ಮೂಲಗಳಿಂದ ಸೋಂಕು ಹರಡಿರುವ ಶಂಕೆ ವ್ಯಕ್ತವಾಗುತ್ತಿದ್ದು ಹೀಗಾಗಿ ಅಧಿಕಾರಿಗಳು ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಪುಣೆಯ ಪ್ರದೇಶಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಶನಿವಾರ ಬಿಡುಗಡೆಯಾದ ಪರೀಕ್ಷಾ ಫಲಿತಾಂಶಗಳು ಪುಣೆಯ ಪ್ರಮುಖ ನೀರಿನ ಜಲಾಶಯವಾದ ಖಡಕ್ವಾಸ್ಲಾ ಅಣೆಕಟ್ಟಿನ ಬಳಿಯ ಬಾವಿಯಲ್ಲಿ ಇ. ಕೋಲಿ ಎಂಬ ಬ್ಯಾಕ್ಟೀರಿಯಾದ ಮಟ್ಟ ಹೆಚ್ಚಾಗಿದೆ ಎಂದು ತೋರಿಸಿದೆ.
ಆದರೆ ಈ ನೀರನ್ನು ಬಳಸಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ನಿವಾಸಿಗಳು ನೀರನ್ನು ಸೇವಿಸುವ ಮೊದಲು ಕುದಿಸಿ ಬಳಸುವಂತೆ ಸಲಹೆ ನೀಡಿದ್ದಾರೆ.
ಅಂತೆಯೇ ಭಾನುವಾರದವರೆಗೆ ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ 25,578 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಜಿಬಿಎಸ್ ಚಿಕಿತ್ಸೆ ತುಂಬಾ ದುಬಾರಿಯಾಗಿದ್ದು, ಚಿಕಿತ್ಲೆಯಲ್ಲಿ ಬಳಸುವ ಪ್ರತಿ ಇಂಜೆಕ್ಷನ್‌ಗೆ ರೂ. 20,000 ವೆಚ್ಚವಾಗುತ್ತದೆ ಎಂದು ಹೇಳಲಾಗಿದೆ. ರೋಗಿಗಳಿಗೆ ಸಾಮಾನ್ಯವಾಗಿ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಚುಚ್ಚುಮದ್ದಿನ ಅಗತ್ಯವಿರುತ್ತದೆ. ಜನವರಿ 16 ರಂದು ದಾಖಲಾಗಿದ್ದ ಅವರ 68 ವರ್ಷದ ಸಂಬಂಧಿಗೆ 13 ಚುಚ್ಚುಮದ್ದಿನ ಐವಿಐಜಿ ಕೋರ್ಸ್ ಅಗತ್ಯವಿದೆ ಎಂದು ಹೇಳಲಾಗಿದೆ.
ನಡೆಯುವ ಸಾಮರ್ಥ್ಯಕ್ಕೆ ಹಾನಿ!
ಜಿಬಿಎಸ್ ಸೋಂಕು ಸಂದರ್ಭದಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿಗೆ ಪ್ರತಿಕ್ರಿಯಿಸುವಾಗ, ದೇಹದ ಭಾಗಗಳಿಗೆ ಮೆದುಳಿನ ಸಂಕೇತಗಳನ್ನು ಸಾಗಿಸುವ ನರಗಳ ಮೇಲೆ ತಪ್ಪಾಗಿ ದಾಳಿ ಮಾಡಿ ದೌರ್ಬಲ್ಯ, ಪಾರ್ಶ್ವವಾಯು ಅಥವಾ ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಆರು ತಿಂಗಳೊಳಗೆ ಶೇ. 80 ರಷ್ಟು ರೋಗಿಗಳು ಸಹಾಯವಿಲ್ಲದೆ ನಡೆಯುವ ಸಾಮರ್ಥ್ಯವನ್ನು ಮರಳಿ ಪಡೆಯುತ್ತಾರೆ ಎಂದು ವೈದ್ಯರು ಹೇಳಿದ್ದಾರೆ, ಆದರೆ ಕೆಲವರು ತಮ್ಮ ಕೈಕಾಲುಗಳನ್ನು ಸಂಪೂರ್ಣವಾಗಿ ಬಳಸಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜಿಬಿಎಸ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ.