ಮೈಸೂರು : ಭಾರತಕ್ಕೆ ಬಹುದೊಡ್ಡ ಗಂಡಾಂತರ ಕಾದಿದೆ. ವಿಶ್ವವೇ ತಿರುಗಿ ನೋಡುವ ಮಟ್ಟಿನ ಆಘಾತ ಎದುರಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಅರಸನ ಅರಮನೆಗೆ ಕಾರ್ಮೋಡ ಕವಿದೀತು,ಜಗತ್ತೇ ತಿರುಗಿನೋಡುವಂತಹ ಆಘಾತ ಭಾರತಕ್ಕಾಗಲಿದೆ ಎನ್ನುವ ಮೂಲಕ ದೇಶ ನಾಯಕ ಸ್ಥಾನದಲ್ಲಿರುವವರಿಗೆ ಆಪತ್ತು ಕಾದಿದೆ ಎಂಬರ್ಥದಲ್ಲಿ ಹೇಳಿರುವ ಭವಿಷ್ಯ ಈಗ ಭಾರೀ ಸಂಚಲನ ಮೂಡಿಸಿದೆ.ಆದರೆ ಅದಕ್ಕೆ ಪರಹಾರ ಮಾಡಿಕೊಂಡರೆ ಸರಿಯಾದೀತು ಎಂಬ ಪರಿಹಾರದ ಸಾಧ್ಯತೆಯನ್ನೂ ತಿಳಿಸಿದ್ದಾರೆ.
ಯುಗಾದಿ ನಂತರ ಮಳೆ, ಬೆಳೆ ಬಗ್ಗೆ ನಿರ್ಧಾರ ಆಗುತ್ತದೆ. ಸಂಕ್ರಾಂತಿಯಲ್ಲಿ ರಾಜ್ಯಕ್ಕೆ ಮತ್ತು ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಇಂಥಹ ವ್ಯಾವಹಾರಿಕ ವಿಷಯಗಳು ಬರುತ್ತವೆ. ಹೀಗಾಗಿ ಸಂಕ್ರಾಂತಿವರೆಗೆ ಏನೂ ತೊಂದರೆ ಇಲ್ಲ, ಸಂಕ್ರಾಂತಿ ಫಲವನ್ನು ನೋಡಿ ಹೇಳಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಘಾದ ಶಕ್ತಿ ಇದೆ.
ಪಂಚತಂತ್ರ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುತ್ತದೆ. ಅವು ದೈವ ವೃಕ್ಷಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.ಮೂರು ವಾರಗಳ ಹಿಂದಷ್ಟೇ ಅವರು ಇದೇ ರೀತಿಯ ಭವಿಷ್ಯವನ್ನು ಹಾಸನದಲ್ಲಿ ಹೇಳಿದ್ದರು. ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುತ್ತದೆ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಜನ ಜೀವನ ಅಸ್ಥಿರಗೊಳ್ಳಲಿದೆ ಎಂದು ಹೇಳಿದ್ದರು.