ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿಯಲ್ಲಿ ರಾಜ್ಯದ 1,275 ಸ್ಥಳಗಳನ್ನು ಪ್ರವಾಸಿ ತಾಣಗಳೆಂಬುದಾಗಿ ಘೋಷಣೆ ಮಾಡಿದೆ.
ಈ ಕುರಿತಂತೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಪ್ರವಾಸೋದ್ಯ ಇಲಾಖೆಯ ಆಯುಕ್ತರು ಏಕ ಕಡತದಲ್ಲಿ ದಿನಾಂಕ 07-11-2024ರಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ಅನುಮೋದನೆ ನೀಡಲಾಗಿರುತ್ತದೆ. ಹೀಗಾಗಿ ಹಿಂದಿನ ನೀತಿಗೆ ಸಂಬಂಧಿಸದ ಎಲ್ಲಾ ಸರ್ಕಾರದ ಆದೇಶಗಳು ಅನೂರ್ಜಿತವಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲು ರಾಜ್ಯದ ಜಿಲ್ಲೆಗಳಿಗೆ ಸಂಬಂಧಿಸಿದ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಪ್ರವಾಸಿ ತಾಣಗಳನ್ನು ಆದ್ಯತಾವಾರು ಪಟ್ಟಿ ಮಾಡಿ, ಪ್ರವಾಸಿಗರ ಭೇಟಿಯ ಅಂಕಿ-ಸಂಖ್ಯೆಗಳನ್ನೊಳಗೊಂಡ ಸಂಪೂರ್ಣ ವಿವರ ಹಾಗೂ ಛಾಯಾಚಿತ್ರಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅವರುಗಳಿಂದ ಪಡೆಯಲಾಗಿದೆ ಎಂದಿದೆ.
ಈ ಮಾಹಿತಿ ಆಧರಿಸಿ ಒಟ್ಟು 1,275 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿ 2024-29ರಡಿ ಸರ್ಕಾರದ ಅನುಮೋದನೆ ನೀಡುವಂತೆ ಕೋರಿರುತ್ತಾರೆ ಎಂದು ಹೇಳಿದ್ದಾರೆ.