ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ಕೆಲ ದೇವಾಲಯಗಳ ಸೇವಾಶುಲ್ಕ ಸದ್ದಿಲ್ಲದೆ ಏರಿಕೆಯಾಗಿದೆ ಎಂಬ ವಿಚಾರ ನಿನ್ನೆಯಿಂದೀಚೆಗೆ ವೈರಲ್ ಆಗಿದೆ. ಇನ್ನು ಮುಂದೆ ದೇವರ ಸೇವೆ ಭಕ್ತಾದಿಗಳ ಜೇಬು ಸುಡಲಿದೆ. ಸುಬ್ರಹ್ಮಣ್ಯ ಸೇರಿದಂತೆ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ನಿತ್ಯ ಭಕ್ತರು ಸಲ್ಲಿಸುವ ಸೇವೆಗಳ ಶುಲ್ಕ ಏರಿಸಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರು ನಿತ್ಯ ಅರ್ಪಿಸುವ ಹೂವಿನ ಪೂಜೆಯ ದರವನ್ನು ಏಕಾಏಕಿ 100 ರೂ. ಏರಿಸಲಾಗಿದೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಗ್ಯಾರಂಟಿಗಳಿಂದ ದಿವಾಳಿಯಾಗಿರುವ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಹಿಂದುಗಳ ದೇವಸ್ಥಾನಗಳಿಗೆ ಕನ್ನ ಹಾಕಲು ತೊಡಗಿದೆ ಎಂಬ ಅಭಿಪ್ರಾಯ ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರ ದೇವಾಲಯಗಳಿದ್ದು, ಈ ದೇವಾಲಯಗಳ ಪೈಕಿ 9 ದೇವಸ್ಥಾನಗಳ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಅಕ್ಟೋಬರ್ 1ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಕಳೆದ 4-5 ವರ್ಷದಿಂದ ಸೇವಾಶುಲ್ಕ ಪರಿಷ್ಕರಣೆ ಮಾಡದ ದೇವಾಲಯಗಳ ಸೇವಾಶುಲ್ಕವನ್ನು ಆಗಮ ಪಂಡಿತರ ಪರಿಶೀಲನೆ ನಂತರ ಶೇ.5-10ವರೆಗೂ ಮುಜರಾಯಿ ಇಲಾಖೆ ಆಯುಕ್ತರು ಏರಿಕೆ ಮಾಡಿದ್ದಾರೆ. ಇದು ದೇವಾಲಯಗಳ ಆಡಳಿತ ಮಂಡಳಿ ತೀರ್ಮಾನವೇ ಹೊರತು ಸರ್ಕಾರದ ನಿರ್ಧಾರವಲ್ಲವೆಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಸೌತಡ್ಕ ಮಹಾಗಣಪತಿ ದೇವಾಲಯ, ಮರೋಳಿ ಸೂರ್ಯನಾರಾಯಣ ಸ್ವಾಮಿ ದೇವಾಲಯಗಳ ಸೇವಾ ಶುಲ್ಕ ಏರಿಕೆ ಮಾಡಲಾಗಿದೆ.
ಉಳಿದಂತೆ ಬೆಂಗಳೂರು ನಗರದ ಯೋಗ ನರಸಿಂಹಸ್ವಾಮಿ ದೇವಾಲಯ, ಮಲ್ಲೇಶ್ವರಂ, ನಂದಿ ತೀರ್ಥ ದೇವಾಲಯ, ಮಲ್ಲೇಶ್ವರಂ, ಮಹಾಗಣಪತಿ ದೇವಾಲಯ, ಮಲ್ಲೇಶ್ವರಂ, ಚಿಕ್ಕಬಳ್ಳಾಪುರದ ವಿಧುರಾಶ್ವಥ ನಾರಾಯಣ ಸ್ವಾಮಿ ದೇವಾಲಯ, ವೆಂಕಟರಮಣ ದೇವಾಲಯ, ತಲಕಾಯ ಬೆಟ್ಟ ದೇವಾಲಯಗಳ ಸೇವಾ ಶುಲ್ಕ ಏರಿಕೆ ಮಾಡಲಾಗಿದೆ.
ನಾಗಾರಾಧನೆ, ದೈವರಾಧನೆಗೆ ಹೆಸರಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ 2010ರಲ್ಲಿ ಸೇವಾಶುಲ್ಕ ಏರಿಕೆ ಮಾಡಲಾಗಿತ್ತು. 15 ವರ್ಷಗಳ ನಂತರ ಇದೀಗ ಸೇವಾಶುಲ್ಕ ಏರಿಕೆ ಮಾಡಲಾಗಿದೆ. ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸೇವೆಗೆ ಈ ಹಿಂದೆ ಇದ್ದ ದರ 400 ರೂಪಾಯಿ, ಪರಿಷ್ಕೃತ ದರ 500 ರೂ.ಗೆ ಏರಿಕೆಯಾಗಿದೆ. ನಾಗಪ್ರತಿಷ್ಠೆಗೆ ಈ ಹಿಂದೆ ಇದ್ದ ದರ 400 ರೂಪಾಯಿ. ಧಾರ್ಮಿಕ ದತ್ತಿ ಇಲಾಖೆ ಪರಿಷ್ಕೃತ ದರ 500 ರೂಪಾಯಿ ಹೆಚ್ಚಿಸಿದೆ. ಹೀಗೆ ಉಳಿದ ಸೇವೆಗಳಲ್ಲೂ ಭಾರಿ ಹೆಚ್ಚಳ ಮಾಡಲಾಗಿದೆ.