ಮುಂಬೈ : ರಾಜ್ಯ ವಕ್ಫ್ ಮಂಡಳಿಯನ್ನು ಬಲಪಡಿಸಲು ಮಹಾರಾಷ್ಟ್ರ ಸರಕಾರ 10 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಿಸಿತ್ತು. ಇದೀಗ ಆದೇಶ ಹೊರಡಿಸಿದ ಒಂದೇ ದಿನಕ್ಕೆ ಸರಕಾರ ತನ್ನ ನಿರ್ಧಾರವನ್ನು ಹಿಂಪಡೆದುಕೊಂಡಿದೆ ಎಂದು ವರದಿಯಾಗಿದೆ. 2024ರ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಮುಸ್ಲಿಂ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ಮಧ್ಯೆ ರಾಜ್ಯ ವಕ್ಫ್ ಮಂಡಳಿಗೆ 10 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡುವ ಕುರಿತ ಸರ್ಕಾರದ ನಿರ್ಣಯದ ಬಗ್ಗೆ ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಮಾಹಿತಿ ನೀಡಿತ್ತು. ವಕ್ಫ್ ಬೋರ್ಡ್ ಗೆ 10 ಕೋಟಿ ರೂ. ವಿತರಿಸುವ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಹಿಂಪಡೆದಿದೆ ಎಂದು ಮಹಾರಾಷ್ಟ್ರ ಸರಕಾರದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಹೇಳಿದ್ದಾರೆ. ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮಹಾಯುತಿಯ ಭಾಗವಾದ ಬಿಜೆಪಿ ವಕ್ಫ್ ಜಮೀನು ನಿರ್ವಹಣೆ ಕುರಿತು ಕಳವಳ ವ್ಯಕ್ತಪಡಿಸಿತ್ತು. ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ 288 ವಿಧಾನಸಭಾ ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆಲ್ಲುವಲ್ಲಿ ಮಹಾಯುತಿ ಯಶಸ್ವಿಯಾಗಿತ್ತು.
