ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಊಟ ಬಡಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ವರನೊಬ್ಬ ಮದುವೆ ಬೇಡ ಎಂದು ನಿರಾಕರಿಸಿದ್ದಾನೆ. ಈ ಬಗ್ಗೆ ನಡೆದ ಎಲ್ಲ ಸಂಧಾನಗಳು ವಿಫಲವಾಗಿದ್ದರಿಂದ, ವರ ಮರುದಿನ ಸಹೋದರ ಸಂಬಂಧಿಯೊಂದಿಗೆ ಮದುವೆಯಾದ ಘಟನೆ ನಡೆದಿದೆ.
ವರನ ಕಡೆಯವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರಿಂದ ವಧು ಮತ್ತು ಆಕೆಯ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು. ಮದುವೆ ಹಿನ್ನೆಲೆ ವಧುವಿನ ಕಡೆಯವರು ವರನ ಕುಟುಂಬಕ್ಕೆ 1.5 ಲಕ್ಷ ರೂ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಊಟಕ್ಕೆ ತಡ ಮಾಡಲಾಗಿದೆ ಎಂದು ವರ ಮದುವೆಗೆ ನಿರಾಕರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ದೂರಿನಲ್ಲಿ ಇರುವುದೇನು?: ವರನ ಕಡೆಯಿಂದ ಸುಮಾರು 200 ಅತಿಥಿಗಳಿಗೆ ಊಟೋಪಚಾರ ಮಾಡಲಾಗಿತ್ತು. ಇದಕ್ಕೆ ಸುಮಾರು 7 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವಧುವಿನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಮದುವೆಗೆ ಕೆಲವೇ ಗಂಟೆಗಳ ಮೊದಲು ವರನ ಕುಟುಂಬಕ್ಕೆ 1.5 ಲಕ್ಷ ರೂಪಾಯಿ ನೀಡಿದ್ದೆವು ಎಂದು ವಧುವಿನ ಕುಟುಂಬ ಅಳಲು ತೋಡಿಕೊಂಡಿದೆ.
ಈ ದೂರು ಪರಿಶೀಲಿಸಿದ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಲಘೆ, ಎರಡೂ ಕಡೆಯವರನ್ನು ಕರೆಯಿಸಿ ಸಂಧಾನ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಕಡೆಯವರು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ವಧುವಿನ ಕುಟುಂಬಕ್ಕೆ 1.61 ಲಕ್ಷ ರೂಪಾಯಿ ನೀಡುವುದಾಗಿ ವರನ ಕಡೆಯವರು ಒಪ್ಪಿಕೊಂಡಿದ್ದಾರೆ, ಎರಡೂ ಕಡೆಯವರು ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸರ್ಕಲ್ ಆಫೀಸರ್ ರಾಜೇಶ್ ರೈ ತಿಳಿಸಿದ್ದಾರೆ.