ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ಗೆ ಇಡಿ (ಜಾರಿ ನಿರ್ದೇಶನಾಲಯ) ಸಮನ್ಸ್ಗೆ ನೀಡಲಾಗಿದ್ದ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ. ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ ಇಡಿ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಸಮನ್ಸ್ ರದ್ದು ಕೋರಿ ಪಾರ್ವತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಗಿದೆ. ಜಾರಿ ನಿರ್ದೇಶನಾಲಯದಿಂದ ಸಿಎಂ ಪತ್ನಿ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲಾಗಿತ್ತು.
ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಮುಡಾದ 14 ಸೈಟ್ ಗಳನ್ನು ಈಗಾಗಲೇ ಮರಳಿಸಲಾಗಿದೆ. ಸೈಟ್ ಗಳನ್ನು ಮರಳಿಸಿರುವುದಿರಂದ ಇಡಿಗೆ ತನಿಖೆ ವ್ಯಾಪ್ತಿ ಇಲ್ಲ. ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಇಡಿ ತನಿಖೆ ನಡೆಸಬಹುದು. ಆದರೆ ಸೈಟ್ ಗಳನ್ನು ಮರಳಿಸಿದ ನಂತರ ಇಡಿ ತನಿಖೆ ಆರಂಭಿಸಿದೆ. ಅಪರಾಧದಿಂದ ಗಳಿಸಿದ ಹಣ ಚಟುವಟಿಕೆಗೆ ಬಳಕೆಯಾಗಬೇಕು. ಇಲ್ಲವಾದರೆ ಪಿಎಂಎಲ್‌ಎ ಕಾಯ್ದೆಯ ಅಂಶಗಳು ಅನ್ವಯವಾಗುವುದಿಲ್ಲವೆಂದು ವಾದಿಸಿದ್ದರು.
2024ರ ಅಕ್ಟೋಬರ್ 1ರಂದೇ 14 ಸೈಟ್ ಗಳನ್ನು ಪಾರ್ವತಿ ಹಿಂತಿರುಗಿಸಿದ್ದಾರೆ. ಮುಡಾ ನೀಡಿದ ಸೈಟ್ ಗಳನ್ನು ಅವರು ಅನುಭವಿಸುತ್ತಿಲ್ಲ. ಹೀಗಾಗಿ ಅಪರಾಧದ ಸಂಪತ್ತು ಅವರ ಬಳಿ ಇಲ್ಲವೆಂದು ವಾದಿಸಿದ್ದಾರೆ. ಅಪರಾಧದ ಸಂಪತ್ತನ್ನು ಮುಚ್ಚಿಟ್ಟಿದ್ದರೆ ಆಗ ಇಡಿಗೆ ತನಿಖಾ ವ್ಯಾಪ್ತಿ ಬರುತ್ತದೆ. ಸಂಪತ್ತಿನ ಸ್ವಾಧೀನದಲ್ಲಿದ್ದರೆ, ಅನುಭವಿಸುತ್ತಿದ್ದರೆ ಇಡಿ ವ್ಯಾಪ್ತಿ ಬರುತ್ತದೆ. ಆದರೆ, ಈ ಕೇಸಿನಲ್ಲಿ ಇಡಿ ಇಸಿಐಆರ್ ದಾಖಲಿಸಿದ್ದೇ ಸರಿಯಲ್ಲವೆಂದು ಚೌಟ ವಾದಿಸಿದ್ದರು. ಹಾಗೇ, ಎಫ್‌ಐಆರ್ ದಾಖಲಿಸಿದ 4 ದಿನಗಳಲ್ಲೇ ಇಡಿ ಇಸಿಐಆರ್ ದಾಖಲಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯನ್ನೇ ಇಡಿ ಪುನರಾವರ್ತಿಸುತ್ತಿದೆ. ಇಡಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ14 ಸೈಟ್ ಅಪರಾಧದ ಸಂಪತ್ತೆಂದಿದೆ. ಮುಡಾದ ಬೇರೆ ಸೈಟ್ ಗಳನ್ನೂ ಜಪ್ತಿ ಮಾಡಿದೆ ಎಂದಿದ್ದರು.
ಮುಡಾದ 14 ಸೈಟ್ ಗಳಲ್ಲದೇ 1708 ಸೈಟ್ ಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ಸೈಟ್ ಗಳನ್ನು ಇಡಿ ತಾತ್ಕಾಲಿಕ ಜಪ್ತಿ ಮಾಡಿದೆ. ತನ್ನ ಕಾರ್ಯವ್ಯಾಪ್ತಿ ಮೀರಿ ಇಡಿ ಪರ್ಯಾಯ ತನಿಖೆ ನಡೆಸುತ್ತಿದೆ. ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಮುಡಾಗೆ ಹಿಂತಿರುಗಿಸಿರುವ 14 ಸೈಟ್ಗಳನ್ನು ಇಡಿ ಜಪ್ತಿ ಮಾಡಿಲ್ಲ. ಆದರೆ ಇತರೆ 160 ಸೈಟ್ ಗಳನ್ನು ಇಡಿ ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಸಿಎಂ ಪತ್ನಿ ಪಾರ್ವತಿ ಪರ ಸಂದೇಶ್ ಚೌಟ ವಾದ ಮಂಡಿಸಿದ್ದರು.
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದ್ದು, ಭ್ರಷ್ಟಾಚಾರ ಹಾಗೂ ಅಪರಾಧದ ಹಣ ಸಯಾಮಿ ಅವಳಿಗಳಂತೆ. ಭ್ರಷ್ಟಾಚಾರ ಆಗುತ್ತಿದ್ದಂತೆ ಅಪರಾಧದ ಹಣ ಸಂಪಾದನೆಯಾಗುತ್ತದೆ. ಖಾಸಗಿ ದೂರಿನಲ್ಲಿ 5 ಸಾವಿರ ಕೋಟಿ ಮುಡಾ ಹಗರಣವನ್ನೂ ಪ್ರಸ್ತಾಪಿಸಲಾಗಿದೆ. ಈ ಖಾಸಗಿ ದೂರನ್ನು ಆಧರಿಸಿಯೇ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೀಗಾಗಿ ಇದು ಕೇವಲ 14 ಸೈಟ್ ಗಳಿಗೆ ಸಂಬಂಧಿಸಿದ ದೂರು ಮಾತ್ರವಲ್ಲ. ಮುಡಾದ ಅಕ್ರಮಗಳ ದೂರಿನ ಬಗ್ಗೆ ಇಡಿ ತನಿಖೆ ನಡೆಸಿದೆ ಎಂದಿದ್ದಾರೆ.
ಮುಡಾದ ಅಪರಾಧದ ಸಂಪತ್ತನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಭಾವಿ ವ್ಯಕ್ತಿಗಳು ನೆಂಟರ ಹೆಸರಿನಲ್ಲಿ ಸೈಟ್ ಗಳ ಹಂಚಿಕೆ ಪಡೆಯುತ್ತಿದ್ದಾರೆ. ಒತ್ತಡ ಹೇರಿ ಸೈಟ್ ಹಂಚಿಕೆ ಪಡೆದಿದ್ದಾರೆಂದು ಸಾಕ್ಷಿಯೊಬ್ಬರ ಹೇಳಿಕೆ ಇದೆ. ಮುಡಾ ಮಾಜಿ ಆಯುಕ್ತರ ಸಂಬಂಧಿಗಳಿಗೆ ಹಲವು ಸೈಟ್ ಹಂಚಲಾಗಿದೆ. ತಾತ, ಹೆಂಡತಿಯ ತಾತ, ಸಹೋದರನ ಮಗ, ಹೆಂಡತಿಯ ತಾತ ಹೀಗೆ ಹಲವು ಸೈಟ್ ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಅರವಿಂದ್ ಕಾಮತ್ ವಾದಿಸಿದ್ದಾರೆ.
ಇಸಿಐಆರ್ ದಾಖಲಿಸಿದಾಗ 14 ಸೈಟ್ ಸಿಎಂ ಪತ್ನಿ ವಶದಲ್ಲಿತ್ತು. ಈ 14 ಸೈಟ್ ಅಪರಾಧದ ಸಂಪತ್ತಾಗಿರುವುದರಿಂದ ತನಿಖೆ ಅಗತ್ಯ. ಈ ಸಮನ್ಸ್ ನಲ್ಲಿ ಇಡಿ ಯಾವುದೇ ಆರೋಪಗಳನ್ನು ಮಾಡಿಲ್ಲ. ಕೇವಲ ಸಾಕ್ಷಿಯಾಗಷ್ಟೇ ಇಡಿ ಸಮನ್ಸ್ ಜಾರಿಗೊಳಿಸಿದೆ. ಅವರಿಂದ ಮಾಹಿತಿ ಪಡೆಯಲೆಂದೇ ಇಡಿ ಸಮನ್ಸ್ ಜಾರಿಗೊಳಿಸಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರಬಹುದು, ಆದರೆ ಕೋರ್ಟ್ ಇನ್ನೂ ಬಿ ರಿಪೋರ್ಟ್ ಅಂಗೀಕರಿಸಿಲ್ಲ. ಬಿ ರಿಪೋರ್ಟ್ ಪ್ರಶ್ನಿಸಲು ಇಡಿಗೂ ಅಧಿಕಾರವಿದೆ. ಸಚಿವ ಭೈರತಿ ಸುರೇಶ್ ಕಚೇರಿಯಿಂದ ಹಲವು ನಿರ್ದೇಶನಗಳು ಹೋಗಿವೆ. ಸಚಿವ ಭೈರತಿ ಸುರೇಶ್ ಕಚೇರಿಯಿಂದ ಅನುಮೋದನೆ ನೀಡಲಾಗಿದೆ. ಹೀಗಾಗಿ ಸಚಿವ ಸುರೇಶ್ ಗೆ ಇಡಿ ಸಮನ್ಸ್ ನೀಡಿದೆ ಎಂದು ಇಡಿ ಪರ ಎಎಸ್‌ಜಿ ಅರವಿಂದ್ ಕಾಮತ್ ವಾದ ಮಂಡಿಸಿದ್ದಾರೆ.