ಬೇಸಿಗೆ ಶಾಖದ ಹಿನ್ನೆಲೆಯಲ್ಲಿ ಮಾರ್ಚ್ 15ರಿಂದ ಮೇ 31ರವರೆಗೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋಟ್ ಧರಿಸಬೇಕೆಂದು ಹೈಕೋರ್ಟ್ ವಿನಾಯಿತಿ ನೀಡಿದೆ.
ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ವಕೀಲರ ಪರಿಷತ್ ಈ ಕುರಿತು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ವಕೀಲರು ಕಪ್ಪು ಕೋಟ್ ಧರಿಸಬೇಕಾದ ಅನಿವಾರ್ಯತೆ ಇಲ್ಲ ಎಂದು ಸೂಚನೆ ನೀಡಿದೆ.
ಆದರೆ, ಬಿಳಿ ಶರ್ಟ್ ಮತ್ತು ನೆಕ್ ಬ್ಯಾಂಡ್ ಧರಿಸುವ ನಿಯಮದಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ ಬೇಸಿಗೆ ಸಂದರ್ಭದಲ್ಲಿ ಕಪ್ಪು ಕೋಟ್ ಧರಿಸುವುದು ತೊಂದರೆ ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಈ ವಿನಾಯಿತಿ ನೀಡಲಾಗಿದೆ.