ಚಿತ್ರದುರ್ಗ: ದಿನಾಂಕ: 12.09.2025 ರಂದು ಸಂಜೆ 6.00 ಗಂಟೆಯಿಂದ ದಿನಾಂಕ: 13.09.2025 ರಂದು ಮಧ್ಯರಾತ್ರಿ 12-00 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನದ್ಯಾಂತ ಎಲ್ಲ ಮದ್ಯ ಮಾರಾಟ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
ಡಿ.ಜೆ. ಬಳಕೆ, ಪೇಪರ್ ಬ್ಲಾಸ್ಟಿಂಗ್, ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ. ಶೋಭಾಯಾತ್ರೆ ಸಮಯದಲ್ಲಿ ಡಿ.ಜೆ.ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಶೋಭಾಯಾತ್ರೆ ಮಾರ್ಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ವ್ಯವಸ್ಥೆ ಕೈಗೊಂಡಿದ್ದು, ಸ್ಥಳದಲ್ಲಿ ಅಗ್ನಿಶಾಮಕದಳದ ವಾಹನವನ್ನು ಸಿಬ್ಬಂದಿಯವರೊಂದಿಗೆ ಕಾಯ್ದಿರಿಸಲು ಕ್ರಮ ಕೈಗೊಂಡಿರುತ್ತದೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾವಹಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ, ಚಿತ್ರಗಳು ಇತರೆ ವಿವರಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 509 ರೌಡಿ ಅಸಾಮಿಗಳು, 63 ಮತೀಯ ಗೂಂಡಾ ಅಸಾಮಿಗಳು, ಸಮಾಜಘಾತುಕ ವ್ಯಕ್ತಿಗಳ ಭದ್ರತಾ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದು, ಈ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಶೋಭಾಯಾತ್ರೆಯಲ್ಲಿ ಹೆಚ್ಚಿನ ಜನಸಂದಣಿ ಸೇರುವುದರಿಂದ, ಯಾವುದೇ ಕಾಲ್ತುಳಿತ ಇನ್ನಿತರೆ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಶೋಭಾಯಾತ್ರೆ ಸಾಗುವ ಮಾರ್ಗದ 05 ಸ್ಥಳಗಳಲ್ಲಿ (Emergency Response Team) ಎಸ್.ಡಿ.ಅರ್.ಎಫ್ ತಂಡವನ್ನು ಸನ್ನದ್ಧವಾಗಿಡಲಾಗಿದೆ. 05 ಕಡೆಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು, 06 ಕಡೆಗಳಲ್ಲಿ ಪೊಲೀಸ್ ಸಹಾಯ ವಾಣಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿರುತ್ತದೆ. ವೈದ್ಯರು, ಪೊಲೀಸ್ ಅಧಿಕಾರಿಗಳು, ಬೆಸ್ಕಾಂ, ರೆಡ್ ಕ್ರಾಸ್, ಗೃಹ ರಕ್ಷಕ, ಅಗ್ನಿಶಾಮಕ ದಳ ಮತ್ತು ನಗರಸಭೆಯ ತರಬೇತಿ ಹೊಂದಿದ ಸಿಬ್ಬಂದಿಯವರನ್ನು ತುರ್ತು ಸ್ವಂದನ ತಂಡಗಳಲ್ಲಿ ನಿಯೋಜಿಸಿದೆ. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿರುವ ಸಾರ್ವಜನಿಕ ವಾಸ ಸ್ಥಳಗಳು (Bylane) ಗಳಲ್ಲಿ ಬಂದೋಬಸ್ತ್‍ಗಾಗಿ ಸಿಬ್ಬಂದಿಯವರನ್ನು ನೇಮಿಸಲಾಗಿರುತ್ತದೆ. ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿನ ಶಿಥಿಲ ಕಟ್ಟಡಗಳ ಮೇಲೆ ಜನರು ನಿಂತು ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದೆ.
ನಗರದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮೆರವಣಿಗೆ ಸಮಯದಲ್ಲಿ ಗಲಾಟೆಯಲ್ಲಿ ತೊಡಗುವಂತಹ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಅಂತಹ ವ್ಯಕ್ತಿಗಳನ್ನು ಪಿಕಪ್ ಮಾಡಲು 05 ಪಿಕಪ್ ಸ್ವ್ಕಾಡ್‍ಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭಕ್ಕೆಂದು ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಮಾರ್ಗದ 10 ಕಡೆಗಳಲ್ಲಿ ಅಂಬ್ಯೂಲೆನ್ಸ್‍ಗಳನ್ನು ನಿಯೋಜಿಸಲಾಗಿರುತ್ತದೆ.
ನಗರದ ಜಿಲ್ಲಾಸ್ಪತ್ರೆ ಮತ್ತು ಬಸವೇಶ್ವರ ಅಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ಒಳಗೊಂಡ ತಂಡಗಳು ಹಾಗೂ 30 ಹಾಸಿಗೆಗಳನ್ನು ಕಾಯ್ದಿರಿಸಲು ಕ್ರಮ ಕೈಗೊಂಡಿರುತ್ತದೆ. ಮೆರವಣಿಗೆ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿವಿಧ ತಂಡಗಳಲ್ಲಿ ನುರಿತ 15 ವೈದ್ಯರನ್ನು ನಿಯೋಜಿಸಲಾಗಿರುತ್ತದೆ. ಸಾರ್ವಜನಿಕರಲ್ಲಿ ಪೊಲೀಸ್ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿ ಕೊಡದೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವ ಸಂದೇಶಗಳಿಗೆ ಗಮನ ಕೊಡದೇ ಶಾಂತಿಯುತವಾಗಿ ಗಣೇಶ ಉತ್ಸವವನ್ನು ಆಚರಿಸಲು ಕೋರಲಾಗಿದೆ.