ಸುಳ್ಯ: ಪತಿಯು ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ಸುಳ್ಯ ತಾಲೂಕಿನ ದೊಡ್ಡತೋಟ ಸಮೀಪದ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ 17ರ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ರಾಮಚಂದ್ರ ಎಂಬಾತ ಕೊಲೆ ಆರೋಪಿ. ಆತನ ಪತ್ನಿ ವಿನೋದ ಹತ್ಯೆಯಾದವರು. ರಾಮಚಂದ್ರ ಪತ್ನಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ವಿನೋದವರಿಗೆ 43 ವರ್ಷವಾಗಿದ್ದು, ರಾಮಚಂದ್ರಗೆ 54 ವರ್ಷ ವಯಸ್ಸಾಗಿತ್ತು.ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ
ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು 10 ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ರೊಡನೆ ರಾಮಚಂದ್ರ ಗೌಡರು ಜಗಳ ಆರಂಭಿಸಿದ್ದಾರೆ. ಈ ರೀತಿ ಜಗಳವಾಡುವುದನ್ನು ಹಿರಿಮಗ ಪ್ರಶಾಂತ್ ವಿರೋಧಿಸಿದ್ದಾನೆ. ಆಗ ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡಿಕ್ಕಲು ಬಂದಿದ್ದಾರೆ.
ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದು ಗಂಡನನ್ನು ತಡೆಯಲು ಪ್ರಯತ್ನಿಸಿದಾಗ ರಾಮಚಂದ್ರ ಗೌಡರು ಹಾರಿಸಿದ ಗುಂಡು ವಿನೋದ ಅವರಿಗೆ ತಾಗಿ ಮೃತಪಟ್ಟಿದ್ದಾರೆ. ಬಳಿಕ ರಾಮಚಂದ್ರ ಗೌಡರು ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.