ನವದೆಹಲಿ: ಕರ್ನಾಟಕ ರಾಜ್ಯ ಸರಕಾರದ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲು ನೀಡುವ ವಿಧೇಯಕ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲು ಕರ್ನಾಟಕ ಸರಕಾರ ಚಿಂತನೆ ನಡೆಸಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಎರಡನೇ ಬಾರಿಯೂ ಈ ವಿಧೇಯಕವನ್ನು ಹಿಂದಿರುಗಿಸಿದ ನಂತರ ಕರ್ನಾಟಕ ಸರ್ಕಾರ ಈ ನಡೆಗೆ ಮುಂದಾಗಿದೆ.
ಸರಕು ಮತ್ತು ಸೇವೆಗಳ ಸರ್ಕಾರಿ ಟೆಂಡರ್ಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ (ವರ್ಗ 1 ಮತ್ತು 2-ಎ) ಕೋಟಾಗಳಲ್ಲದೆ, 1 ಕೋಟಿ ರೂ.ವರೆಗಿನ ನಾಗರಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ವಿಧೇಯಕ ಪ್ರಸ್ತಾಪಿಸುತ್ತದೆ. ಬಿಜೆಪಿಯ ವಿರೋಧದ ಹೊರತಾಗಿಯೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ- 2025 ಅನ್ನು ಮಾರ್ಚ್ನಲ್ಲಿ ರಾಜ್ಯ ವಿಧಾನಸಭೆ ಅಂಗೀಕರಿಸಿದೆ. ಈ ವಿಧೇಯಕ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಿಲ್ ಅನ್ನು ಸಮಾಜದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗಗಳನ್ನು ಬಲಪಡಿಸುವ ಸಾಧನವೆಂದು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಪಾಲ ಗೆಹ್ಲೋಟ್ ಅವರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸರಕಾರ ಮುಂದಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಸಾಂವಿಧಾನಿಕ ತಜ್ಞರು ಕಾನೂನು ಕ್ರಮಕ್ಕೆ ಮುಂದಾಗದಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ, ಬದಲಿಗೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಈ ವಿಷಯದ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.