ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಕೊಡಿಸುವ ನೆಪದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಬಗ್ಗೆ ಮಹಿಳಾ ವಕೀಲರೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಎಂ.ರಾಜೇಶ್ವರಿ ನೀಡಿದ ದೂರಿನಂತೆ ವಕೀಲೆ ದಯೀನಾ ಬಾನು ಎಂಬವರ ವಿರುದ್ಧ ಬಿಎನ್ಎಸ್ 318 (4) ಅಡಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಒಂದರಲ್ಲಿ ಜಾಮೀನು ಕೊಡಿಸಲು ಹೈಕೋರ್ಟ್ ನ್ಯಾಯಮೂರ್ತಿ 50 ಲಕ್ಷ ರೂ. ಹಣ ಕೇಳುತ್ತಿದ್ದಾರೆ. ಹಣ ನೀಡದಿದ್ದರೆ ಜಾಮೀನು ಅರ್ಜಿಯನ್ನ ಬೇರೆ ವಕೀಲರಿಂದ ಮಾಡಿಸಿಕೊಳ್ಳಿ ಎಂದು ದಯೀನಾ ಬಾನು ಹೇಳಿರುವುದಾಗಿ ಎಫ್ಐಆರ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ 24 ವರ್ಷದ ವಿಷ್ಣುದೇವನ್ ಜಾಮೀನು ಸಿಗದೆ ಮೂರು ವರ್ಷಗಳಿಂದ ಜೈಲಿನಲ್ಲಿದ್ದ. ಮಗನನ್ನು ಜಾಮೀನಿನಲ್ಲಿ ಬಿಡಿಸಲು ಆತನ ತಾಯಿ ಥೆರೆಸಾ, ಮಹಿಳಾ ನ್ಯಾಯವಾದಿ ಮರೀನಾ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮರೀನಾ 10 ಲಕ್ಷ ರೂ. ಹಣ ಪಡೆದಿದ್ದರು. ಹಣ ಪಡೆದರೂ ಆರೋಪಿಗೆ ಜಾಮೀನು ಕೊಡಿಸಲು ವಿಫಲವಾಗಿದ್ದರಿಂದ ತಾಯಿ ಥೆರೆಸಾ, ತನ್ನ ಹಣ ವಾಪಸ್ ನೀಡುವಂತೆ ಕೇಳಿದ್ದರು. ಆಗ ವಕೀಲೆ 9 ಲಕ್ಷ ರೂ. ಮೊತ್ತದ 3 ಚೆಕ್ ನೀಡಿದ್ದು ಬಿಟ್ಟರೆ ಹಣ ಹಿಂದಿರುಗಿಸಲಿರಲಿಲ್ಲ.
ಹಣ ವಾಪಸ್ ನೀಡಲು ಒತ್ತಡ ಹೇರಿದಾಗ ಥೆರೆಸಾಗೆ ವಕೀಲೆ ಮರೀನಾ ಅವರು ಆರತಿ ಎಂಬವರನ್ನ ಪರಿಚಯಿಸಿದ್ದರು. ಅವರು ತನಗೆ ಹೈಕೋರ್ಟ್ ನ್ಯಾಯಮೂರ್ತಿಯ ಪರಿಚಯ ಇರುವುದಾಗಿ ಹೇಳಿ 72 ಸಾವಿರ ರೂ. ಪಡೆದಿದ್ದರು. ಆದರೆ ಯಾವುದೇ ಫಲ ನೀಡಿರಲಿಲ್ಲ. ಇದೇ ವೇಳೆ, ಮತ್ತೊಬ್ಬ ವಕೀಲೆ ದಯೀನಾ ಬಾನು ಪರಿಚಯವಾಗಿದ್ದು ಅವರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಜಾಮೀನು ಕೊಡಿಸಲು 50 ಲಕ್ಷ ರೂ. ಹಣವನ್ನು ಕೇಳುತ್ತಿದ್ದಾರೆ. ಹಣ ನೀಡಲು ಸಾಧ್ಯವಾಗದಿದ್ದರೆ ಜಾಮೀನು ಪಡೆಯಲು ಬೇರೆ ವಕೀಲರನ್ನು ನೇಮಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಇದರಿಂದ ಬೇಸತ್ತ ಥೆರೆಸಾ ಅವರು ವಕೀಲೆ ದಯೀನಾ ಬಾನು ಹೈಕೋರ್ಟ್ ನ್ಯಾಯಮೂರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾಗಿ ಹೈಕೋರ್ಟ್ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರಾರ್ ಗಮನಕ್ಕೆ ತಂದಿದ್ದರು. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.