ನವದೆಹಲಿ : ಬದುಕು ಯಾವಾಗ, ಹೇಗೆ ತಿರುವು ಪಡೆಯುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಒಂಟಿಯಾಗಿ ತಮ್ಮ ಮಕ್ಕಳ ಜವಾಬ್ದಾರಿ ಹೊತ್ತು, ಅವರ ಭವಿಷ್ಯ ಕಟ್ಟಿಕೊಡುವ ಹೊಣೆ ಬದುಕು ನೀಡುತ್ತದೆ.
ಇಲ್ಲೊಬ್ಬ ಆಟೋ ಚಾಲಕನ ಬದುಕು ಕೂಡ ಅಂಥದ್ದೇ ಕಣ್ಣೀರಿನ ಕಥೆ. ಪತ್ನಿಯನ್ನು ಕಳೆದುಕೊಂಡ ಈ ಆಟೋ ಚಾಲಕ, ತನ್ನ ಪುಟ್ಟ ಮಗಳಿಗೆ ತಂದೆಯೂ ಆಗಿದ್ದಾನೆ, ತಾಯಿಯೂ ಆಗಿದ್ದಾನೆ. ಬದುಕಿನ ಭಾರವನ್ನು ಹೆಗಲ ಮೇಲೆ ಹೊತ್ತು, ಆಟೋದಲ್ಲೇ ತನ್ನ ಪುಟ್ಟ ಪ್ರಪಂಚವನ್ನು ಮಲಗಿಸಿಕೊಂಡು ಶ್ರದ್ಧೆಯಿಂದ ದುಡಿದುಕೊಳ್ಳುತ್ತಿರುವ ಈ ತಂದೆಯ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಮನಸ್ಸುಗಳನ್ನು ಮುಟ್ಟಿದೆ.
@SaffronChargers ಎಂಬ ಎಕ್ಸ್ ಖಾತೆಯಲ್ಲಿ ಈ ಆಟೋ ಚಾಲಕನ ಜೀವನದ ವಿಡಿಯೋ ಹಂಚಿಕೊಳ್ಳಲಾಗಿದ್ದು, ‘ಪುರುಷನಾಗಿರುವುದು ಅಷ್ಟು ಸುಲಭವಲ್ಲ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಪತ್ನಿ ಸಾವನ್ನಪ್ಪಿದ ಬಳಿಕ ಈ ವ್ಯಕ್ತಿಗೆ ಮಗಳೇ ಸರ್ವಸ್ವವಾಗಿದ್ದು, ಆಕೆಯನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಾ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ಸಿಂಗಲ್ ಪೇರೆಂಟ್ನ ಚಿತ್ರಣ ಈ ವಿಡಿಯೋದಲ್ಲಿ ಕಾಣಿಸುತ್ತದೆ.
ವಿಡಿಯೋದಲ್ಲಿ ಆಟೋ ಚಾಲಕನು ತನ್ನ ಪುಟ್ಟ ಮಗಳನ್ನು ಆಟೋದಲ್ಲೇ ಮಲಗಿಸಿರುವ ದೃಶ್ಯ ಕಂಡುಬರುತ್ತದೆ. ಈ ವೇಳೆ ಆಟೋದಲ್ಲಿದ್ದ ಪ್ರಯಾಣಿಕರೊಬ್ಬರು, ‘ಮಗುವನ್ನು ಆಟೋದಲ್ಲಿ ಏಕೆ ಮಲಗಿಸಿದ್ದೀರಿ? ಯಾರಿದು ಮಗು?’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸಿದ ಆಟೋ ಚಾಲಕ, ‘ಇವಳು ನನ್ನ ಮಗಳು. ಇತ್ತೀಚೆಗೆ ನನ್ನ ಹೆಂಡತಿ ತೀರಿಕೊಂಡಳು.
ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಕೆಲಸಕ್ಕೆ ಬರಲು ನನಗೆ ಸಾಧ್ಯವಿಲ್ಲ. ಮಗುವನ್ನು ನೋಡಿಕೊಳ್ಳಬೇಕಿದೆ. ಜೊತೆಗೆ ಕೆಲಸಕ್ಕೆ ಹೋಗದಿದ್ದರೆ ಜೀವನ ಸಾಗುವುದೇ ಕಷ್ಟ. ಈಗ ನಾನು ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ’ ಎಂದು ನೋವಿನಿಂದ ಹೇಳಿಕೊಂಡಿದ್ದಾನೆ. ಈ ಮಾತುಗಳನ್ನು ಕೇಳಿ ಮನಸೊಳಗೇ ನೊಂದ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹೇಳಿ ಹಣ ನೀಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಆ ಕ್ಷಣವೇ ಈ ಕಥೆಯ ಹೃದಯಸ್ಪರ್ಶಿತ್ವವನ್ನು ಮತ್ತಷ್ಟು ಗಾಢಗೊಳಿಸಿದೆ.
ಈ ವಿಡಿಯೋ ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಜನರ ಮನಸ್ಸನ್ನು ಕದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಬಳಕೆದಾರರು, ‘ಅಪ್ಪ ಯಾವತ್ತಿದ್ದರೂ ಹೀರೋನೇ’, ‘ಕಷ್ಟಪಟ್ಟು ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಸುಲಭವಲ್ಲ, ಇವರೆ ನಿಜವಾದ ಹೀರೋಗಳು’, ‘ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಭಾವನಾತ್ಮಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಈ ಆಟೋ ಚಾಲಕನ ಬದುಕಿನ ಕಥೆ, ತಂದೆಯ ಪ್ರೀತಿ, ತ್ಯಾಗ ಮತ್ತು ಹೊಣೆಗಾರಿಕೆ ಯಾವ ಮಟ್ಟಿಗೆ ಆಳವಾಗಿರಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
































