ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ 1 ಸಿನಿಮಾ ಬ್ಲಾಕ್ಬಸ್ಟರ್ ಕಾಂತಾರದ ಬಹು ನಿರೀಕ್ಷಿತ ಪ್ರೀಕ್ವೆಲ್ ಚಿತ್ರವಾಗಿದೆ.ಈ ಚಿತ್ರವು ನಾಳೆ ಅಕ್ಟೋಬರ್ 2, 2025 ಎಂಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಬೆಂಗಳೂರಿನಲ್ಲಿ ಮೊದಲ ದಿನದ ಟಿಕೆಟ್ 1200 ರು.ವರೆಗೂ ಬಿಕರಿಯಾಗಿದೆ.
ಇಷ್ಟು ದುಬಾರಿ ಮೊತ್ತ ನಿಗದಿ ಮಾಡಿರುವ ಶೋಗಳ ಎಲ್ಲ ಟಿಕೆಟ್ಗಳು ಸೋಲ್ಡೌಟ್ ಆಗಿವೆ! ದೇಶಾದ್ಯಂತ 6500ರಿಂದ 7000 ಪರದೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದ್ದು, ಕನ್ನಡದ ಯಾವೊಂದು ಚಿತ್ರ ಕೂಡ ಮೊದಲ ದಿನ ಇಷ್ಟೊಂದು ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಕಾಂತಾರ ಚಾಪ್ಟರ್ ಒನ್ ಚಿತ್ರ ಆಲ್ ಓವರ್ ಇಂಡಿಯಾ ರಿಲೀಸ್ ಆಗುತ್ತಿದೆ. 7ಕ್ಕೂ ಅಧಿಕ ಭಾಷೆಗಳಲ್ಲಿರುವ ಈ ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ.
ಇದು ಕೂಡ ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಮೊದಲು. 34 ನಿಮಿಷದಲ್ಲೇ 10 ಸಾವಿರ ಟಿಕೆಟ್ಗಳು ಬುಕ್ ಆಗಿವೆ. ಇಷ್ಟೊಂದು ವೇಗದಲ್ಲಿ ಟಿಕೆಟ್ ಖರೀದಿಸಲ್ಪಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೂ ಕಾಂತಾರ ಭಾಜನವಾಗಿದೆ. ಅಲ್ಲದೆ, ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ನಿಂದಲೇ 3 ಕೋಟಿ ರು.ಗಳನ್ನು ಚಿತ್ರ ಗಳಿಸಿದ್ದು, ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡಿದೆ.
ದೇಶಾದ್ಯಂತ ಟಿಕೆಟ್ಗಳ ಅಡ್ವಾನ್ಸ್ ಬುಕಿಂಗ್ನಿಂದಲೇ 11 ಕೋಟಿ ರು. ಗಳಿಕೆಯಾಗಿದೆ ಎನ್ನಲಾಗಿದೆ. ರಾಜ್ಯದ ಹಲವೆಡೆ ಬೆಳಗ್ಗೆ 6.30ರಿಂದಲೇ ಪ್ರದರ್ಶನ ನಿಗದಿಯಾಗಿದ್ದು, ಮೊದಲ ದಿನವೇ 2000ಕ್ಕೂ ಅಧಿಕ ಶೋಗಳು ನಡೆಯಲಿವೆ.