ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನಮೂಡಿಸಿರುವ ಧರ್ಮಸ್ಥಳ ಪ್ರಕರಣದಲ್ಲಿ (ಅಪರಾಧ ಸಂಖ್ಯೆ 39/2025) ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಮಾಧಿ ಅಗೆಯುವ ಪ್ರಕ್ರಿಯೆ ಮುಗಿದ ತಕ್ಷಣ, ಪ್ರಕರಣದ ಪ್ರಮುಖ ಸಾಕ್ಷಿ ದೂರುದಾರ ತಲೆಮರೆಸಿಕೊಳ್ಳುವ ಸಾಧ್ಯತೆಯ ಬಗ್ಗೆ ಸ್ಥಳೀಯರಿಂದ ಗುಪ್ತ ಮಾಹಿತಿ ಲಭ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ.ಅರುಣ್ ತಿಳಿಸಿದ್ದಾರೆ.ಈ ಕುರಿತು ನಾಲ್ಕು ಅಂಶಗಳ ಪ್ರಕಟಣೆ ಹೊರಡಿಸಿರುವ ಅವರು, ತನಿಖೆಯ ಸೂಕ್ಷ್ಮತೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ಸಮಾಧಿ ಅಗೆಯುವ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಾಕ್ಷಿ ದೂರುದಾರನು ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯರಿಂದ ಗುಪ್ತ ಮಾಹಿತಿ ದೊರಕಿದೆ. ಇದೇ ಕಾರಣಕ್ಕಾಗಿ, ಸೂಕ್ತ ತನಿಖಾ ಪ್ರಕ್ರಿಯೆ ಅನುಸರಿಸದೆ ಸಮಾಧಿ ಅಗೆಯಲು ಆತುರಪಡಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಷಯವನ್ನು ದೂರುದಾರರ ವಕೀಲರ ಗಮನಕ್ಕೂ ತರಲಾಗಿದ್ದು, ಈ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.” ಎಂದು ಎಸ್ಪಿ ತಿಳಿಸಿದ್ದಾರೆ.ಪ್ರಕರಣದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು, ಸಾಕ್ಷಿ ದೂರುದಾರರ ಸಮ್ಮತಿ ಪಡೆದು ಅವರ ಬೈನ್ ಮ್ಯಾಪಿಂಗ್, ಫಿಂಗರ್ಪ್ರಿಂಟ್ ಹಾಗೂ ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ಕೋರಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ:ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ಬಂದಿದೆ. ಆದರೆ, ಈ ವಿಚಾರವನ್ನು ದೂರುದಾರರು ಅಥವಾ ಅವರ ವಕೀಲರು ಅಧಿಕೃತವಾಗಿ ತನಿಖಾಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ಹೀಗಾಗಿ, ಈ ಮಾಹಿತಿಯನ್ನು ಪರಿಶೀಲಿಸಬೇಕಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಸಮಾಧಿ ಅಗೆತಕ್ಕೆ ಆತುರವಿಲ್ಲ: “ಸಮಾಧಿಅಗೆಯುವ ಪ್ರಕ್ರಿಯೆಯು ಆತುರಾತುರವಾಗಿ ನಡೆಯುವುದಿಲ್ಲ. ತನಿಖೆಯ ಯಾವ ಹಂತದಲ್ಲಿ ಇದು ಸೂಕ್ತವೆಂದು ತನಿಖಾಧಿಕಾರಿ ನಿರ್ಧರಿಸುತ್ತಾರೋ, ಆವಾಗ ಮಾತ್ರ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಇದನ್ನು ನಡೆಸಲಾಗುವುದು,’ ಎಂದು ಎಸ್ಪಿ ಡಾ. ಅರುಣ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ದೂರುದಾರ ತಲೆಮರೆಸಿಕೊಳ್ಳುವ ಸಾಧ್ಯತೆಯ ಗುಪ್ತ ಮಾಹಿತಿ ಹಾಗೂ ಆತನಿಗೆ ವೈಜ್ಞಾನಿಕ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆಗಳು ಮುಂದಿನ ತನಿಖೆಯ ದಿಕ್ಕನ್ನು ನಿರ್ಧರಿಸಲಿದ್ದು, ತೀವ್ರ ಕುತೂಹಲ ಕೆರಳಿಸಿವೆ.