ಬೆಂಗಳೂರು: ಇಂದು ಮುಂಜಾನೆ ಭಾರತೀಯ ಯೋಧರು ನಡೆಸಿದ ಆಪರೇಷನ್ ಸಿಂಧೂರ್ ಸರ್ಜಿಕಲ್ ಸ್ಟ್ರೈಕ್‌ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಸೇನೆಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಈ ನಡುವೆ ಕರ್ನಾಟಕ ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಹಂಚಿಕೊಂಡು ಎಡವಟ್ಟು ಮಾಡಿಕೊಂಡಿದೆ.
ಆಪರೇಷನ್ ಸಿಂಧೂರ್ ಬೆನ್ನಲ್ಲೇ ತನ್ನ ಎಕ್ಸ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್, ಮಹಾತ್ಮ ಗಾಂಧಿ ಅವರ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂಬ ಸಂದೇಶವನ್ನು ಹಂಚಿಕೊಂಡಿತ್ತು. ಇದಕ್ಕೆ ಕಾಂಗ್ರೆಸ್ ವಿರುದ್ಧ ನೆಟ್ಟಿಗರು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಕೆಲವೇ ಕ್ಷಣಗಳಲ್ಲಿ ಎಕ್ಸ್ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಮತ್ತೊಂದು ಪೋಸ್ಟ್ ಹಂಚಿಕೊಂಡು ಸೇನೆಯನ್ನು ಕೊಂಡಾಡಿದೆ.
ವಿಶ್ವದ ಬಲಿಷ್ಠ ವಾಯುಪಡೆಗಳಲ್ಲಿ ಒಂದೆಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಭಾರತೀಯ ವಾಯುಪಡೆ ಹೇಡಿತನದ ಪಹಲ್ಗಾಮ್ ದಾಳಿಗೆ ತಕ್ಕ ಉತ್ತರ ನೀಡಿದೆ. ಈ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರ ಮತ್ತು ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ ಎಂದು ಮತ್ತೊಂದು ಪೋಸ್ಟ್ ಅನ್ನು ಕಾಂಗ್ರೆಸ್ ಹಂಚಿಕೊಂಡಿದೆ.