ಮೈಸೂರಿನಲ್ಲಿ ಹೀಲಿಯಂ ಸ್ಫೋಟ ಪ್ರಕರಣ ಇದೀಗ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಚುರುಕುಗೊಳಿಸಿದೆ.
ಮೈಸೂರಿನ ಅಂಬಾ ವಿಲಾಸ ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಸಲೀಂ ಎಂಬಾತ ಬಲೂನ್ ಮಾರುತ್ತಿದ್ದ ವೇಳೆ ಬಲೂನ್ಗೆ ತುಂಬುವ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸಲೀಂನ ದೇಹ ಛಿದ್ರಗೊಂಡಿತ್ತು.
ಇದೀಗ ಘಟನಾಸ್ಥಳಕ್ಕೆ ರಾಷ್ಟ್ರೀಯ ತನಿಖಾ ತಂಡ ಆಗಮಿಸಿ, ಪರಿಶೀಲನೆ ನಡೆಸಿದೆ. ಅಲ್ಲದೇ ಬಲೂನ್ ಮಾರುವ ಸಲೀಂನ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಸಲೀಂ ಕೊಲ್ಕತ್ತಾದವ ಎನ್ನಲಾಗಿದ್ದು, ಇದೀಗ ಆತ ಉತ್ತರ ಪ್ರದೇಶ ಮೂಲದವನೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸಹೋದರರ ಜೊತೆ ಮೈಸೂರಿಗೆ ಬಂದಿದ್ದ ಈತ ಕಳೆದ 15 ದಿನಗಳಿಂದ ಲಷ್ಕರ್ ಮೊಹಲ್ಲಾದ ಷರೀಪ್ ಲಾಡ್ಜ್ ನಲ್ಲಿ ವಾಸವಾಗಿದ್ದ. ಸಾಮಾನ್ಯವಾಗಿ ಹೀಲಿಯಂ ಸ್ಫೋಟವಾಗುವುದಿಲ್ಲ.
ಹೀಲಿಯಂಗೆ ಬೇರೆ ಗ್ಯಾಸ್ ಮಿಶ್ರಣ ಮಾಡಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅರಮನೆಯ ಗೈಡ್ ಪ್ರಕಾರ, ಈ ಮೊದಲು ಈತ ಅರಮನೆ ಮುಂಭಾಗದಲ್ಲಿ ಯಾವತ್ತೂ ಬಲೂನ್ ಮಾರುತ್ತಿರಲಿಲ್ಲ. ಈತ ಬಂದ ಕೆಲ ಹೊತ್ತಿನಲ್ಲೇ ಸ್ಫೋಟ ಸಂಭವಿಸಿದ್ದು, ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನುವ ಸಂದೇಹ ಮೂಡಿದೆ. ಹೀಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
































