ಕೋಲಾರ : ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಮಾನವೀಯತೆಯನ್ನು ಕಲುಷಿತಗೊಳಿಸುವ ಘಟನೆ ಬೆಳಕಿಗೆ ಬಂದಿದೆ. ಹೆತ್ತ ಐದೇ ದಿನದ ಗಂಡು ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿದ ಆರೋಪದಲ್ಲಿ ಪತಿ–ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಮೂಲಕ ಮಗು ಮಾರಾಟ ಜಾಲವೊಂದು ಪತ್ತೆಯಾಗಿದೆ.
ಶ್ರೀನಿವಾಸಪುರ ಪಟ್ಟಣದ ನೀತು ಮತ್ತು ರಾಘವೇಂದ್ರ ದಂಪತಿಗೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಐದು ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಈಗಾಗಲೇ ಇಬ್ಬರು ಮಕ್ಕಳಿರುವ ಈ ದಂಪತಿ, ಮೂರನೇ ಮಗುವನ್ನು ಸಾಕಲು ಇಚ್ಛಿಸದೆ ಮಧ್ಯವರ್ತಿಯ ಮೂಲಕ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪತಿ ರಾಘವೇಂದ್ರಗೆ ಪರಿಚಿತನಾಗಿದ್ದ ನಾರಾಯಣಸ್ವಾಮಿ ಎಂಬ ಮಧ್ಯವರ್ತಿಗೆ ಈ ದಂಪತಿ ಗಂಡು ಮಗುವನ್ನು 2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಮಧ್ಯವರ್ತಿ ನಾರಾಯಣಸ್ವಾಮಿ ಆ ಮಗುವನ್ನು ಹೆಚ್ಚಿನ ಬೆಲೆಗೆ ಮತ್ತೊಬ್ಬರಿಗೆ ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಮಗು ಮಾರಾಟ ವಿಚಾರ ತಿಳಿಯುತ್ತಿದ್ದಂತೆಯೇ ಶ್ರೀನಿವಾಸಪುರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಬಳಿಕ ಮಧ್ಯವರ್ತಿ ನಾರಾಯಣಸ್ವಾಮಿಯನ್ನು ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯಂತೆ, ಚಿಂತಾಮಣಿ ಮೂಲದ ವ್ಯಕ್ತಿಯೊಬ್ಬರಿಗೆ ಮಧ್ಯವರ್ತಿ ಗಂಡು ಮಗುವನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಗಂಡು ಮಗು ಬೇಕು ಎಂಬ ಆಮಿಷವೊಡ್ಡಿ ಹಣ ಪಡೆದು ಮಗು ನೀಡಿರುವ ಶಂಕೆ ವ್ಯಕ್ತವಾಗಿದೆ. ಮಾರಾಟವಾದ ಮಗುವನ್ನು ಸುರಕ್ಷಿತವಾಗಿ ಮರಳಿ ಪಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮಕ್ಕಳ ಮಾರಾಟ ಜಾಲದ ಇತರೆ ಸಂಪರ್ಕಗಳನ್ನೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.































