ನವದೆಹಲಿ : ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾದ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) – ವಿಕಸಿತ್ ಭಾರತ್ ಜಿ ರಾಮ್ ಜಿ ಮಸೂದೆ 2025 ಶುಕ್ರವಾರ ಮಧ್ಯರಾತ್ರಿ ರಾಜ್ಯಸಭೆಯಲ್ಲೂ ಅಂಗೀಕರಿಸಲಾಯಿತು. ತಡರಾತ್ರಿ ಸುಮಾರು 12:15ರ ವೇಳೆಗೆ ಧ್ವನಿ ಮತದ ಮೂಲಕ ಮಸೂದೆಗೆ ಅನುಮೋದನೆ ದೊರೆಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNAREGA)ಯ ಹೆಸರನ್ನು ಬದಲಿಸಿ ಹೊಸ ರೂಪದಲ್ಲಿ ಮಸೂದೆ ಪರಿಚಯಿಸಿರುವುದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ಭಾರೀ ಗದ್ದಲ ಹಾಗೂ ಕೋಲಾಹಲ ಉಂಟಾಯಿತು.
ವಿಪಕ್ಷಗಳ ಆಕ್ರೋಶದ ನಡುವೆಯೇ, ಕೊನೆಗೆ ಮಸೂದೆಯ ವಿರೋಧವಾಗಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಭಾತ್ಯಾಗ ನಡೆಸಿದವು. ಈ ಸಂದರ್ಭ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಸೂದೆಗೆ ಅಂಗೀಕಾರ ಪಡೆದುಕೊಂಡರು.
ಬೆಳಗಿನ ಜಾವದವರೆಗೂ ಧರಣಿ : ಜಿ ರಾಮ್ ಜಿ ಮಸೂದೆಯನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸಂಸತ್ತಿನ ಆವರಣದಲ್ಲೇ ರಾತ್ರಿ ಪೂರ್ತಿ ಧರಣಿ ನಡೆಸಿದರು. ಸಂವಿಧಾನ ಸದನದ ಗೇಟ್ ಬಳಿ ಪ್ರತಿಭಟನೆ ನಡೆಸಿದ ಅವರು, ಸರ್ಕಾರದ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿದರು. ಈ ಪ್ರತಿಭಟನೆ ಬೆಳಗಿನ ಜಾವದವರೆಗೂ ಮುಂದುವರಿಯಿತು.
ಮಸೂದೆ ಅಂಗೀಕಾರದೊಂದಿಗೆ ಗ್ರಾಮೀಣ ಉದ್ಯೋಗ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಯಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಇದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
































