ಮಂಗಳೂರು : ಇಸ್ರೇಲ್ ಮೂಲದ ಪ್ರಖ್ಯಾತ ಡಿಜೆ ಸಜಂಕಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಡಿಜೆ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದಾಗಿದೆ. ಹಿಂದೂ ಪರ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕೊನೇ ಕ್ಷಣದಲ್ಲಿ ಅನುಮತಿ ನಿರಾಕರಿಸಿದ್ದು, ಮಂಗಳೂರಿನ ಬೋಳಾರದ ಸಿಟಿ ಬೀಚ್‌ನಲ್ಲಿ ನಿನ್ನೆ ಸಂಜೆ ನಡೆಯಬೇಕಿದ್ದ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಜಗತ್ತಿನ ಪ್ರಖ್ಯಾತ ಸಂಗೀತಗಾರ ಡಿಜೆ ಸಜಂಕಾ ಕಾರ್ಯಕ್ರಮ ಮಂಗಳೂರಿನ ಸಿಟಿ ಬೀಚ್ ನಲ್ಲಿ ನಿನ್ನೆ ಆಯೋಜಿಸಲಾಗಿತ್ತು. ಆದರೆ ಡಿಜೆ ಸಜಂಕಾ ವಿರುದ್ದ ಹಿಂದೂ ಸಂಘಟನೆಗಳು ಹಿಂದೂ ದೇವರ ಅವಹೇಳನ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಚಾರ ಎಂದು ಆರೋಪಿಸಿದ್ದವು. ಸಜಂಕಾ ಡಿಜೆ ಕಾರ್ಯಕ್ರಮದಲ್ಲಿ ಹಿಂದೂ ದೇವರ ಶ್ಲೋಕ, ಮಂತ್ರ, ಗಾಯತ್ರಿ ಮಂತ್ರ, ವಿಷ್ಣು ಸಹಸ್ರನಾಮ ಹಾಗೂ ದುರ್ಗಾ ಸಪ್ತಶತಿ ಮಂತ್ರಗಳನ್ನು ವಿಡಂಬನೆಯ ರೂಪದಲ್ಲಿ ಬಳಸಲಾಗುತ್ತಿದೆ.
ಹಿಂದೂ ಸಂಘಟನೆಗಳ ಪ್ರಕಾರ, ಈ ಕಾರ್ಯಕ್ರಮ ಧಾರ್ಮಿಕ ಭಾವನೆಗೆ ನಿಂದನೆ ಮಾಡುವಂತಾಗಿದೆ. ಅಲ್ಲದೇ ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯು ಈ ಕಾರ್ಯಕ್ರಮದಲ್ಲಿ ಡ್ರಗ್ ಪೂರೈಕೆ ಮತ್ತು ಅಶ್ಲೀಲ ಕುಣಿತದ ಬಗ್ಗೆ ಕೂಡ ಆರೋಪಗಳನ್ನು ಎತ್ತಿದ್ದವು. ಅಲ್ಲದೇ ಬಜರಂಗದಳ ಮತ್ತು ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪೊಲೀಸರಲ್ಲಿ ಮನವಿ ಮಾಡಿದ್ದು, ಕಾರ್ಯಕ್ರಮ ನಡೆದರೆ ಅದೇ ಸ್ಥಳದಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದವು. ಇನ್ನು ಈ ಕಾರ್ಯಕ್ರಮಕ್ಕೆ ಈಗಾಗಲೇ ಟಿಕೆಟ್ ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿತ್ತು. ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ಹಿಂದೂ ಸಂಘಟನೆಗಳ ಪ್ರತಿಭಟನೆಯ ಎಚ್ಚರಿಕೆ ಬೆನ್ನಲ್ಲೇ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಇನ್ನು ಡಿಜೆ ಸಜಂಕಾ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು, ರದ್ದಾದ ಹಿನ್ನೆಲೆ ವಾಪಸ್ ತೆರಳಲಿದ್ದಾರೆ.
ಸಜಂಕಾ ಡಿಜೆ ಕಾರ್ಯಕ್ರಮವನ್ನು ತಡೆದೇ ತಡೆಯುತ್ತೇವೆ ಎಂದಿದ್ದ ವಿಎಚ್ ಪಿ!
ಇನ್ನು ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ವಿಎಚ್ಪಿ ಹಾಗೂ ದುರ್ಗಾವಾಹಿನಿ ದೂರು ನೀಡಿತ್ತು. ಅಲ್ಲದೇ ಕಾರ್ಯಕ್ರಮದ ವಿರುದ್ದ ವಿಶ್ವಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರ್ಯಕ್ರಮ ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದೆ. ಮಂಗಳೂರಿನಲ್ಲಿ ನಿಷೇಧಿತ ಮಾದಕ ದೃವ್ಯಗಳ ದೊಡ್ಡ ಜಾಲ ಸಕ್ರೀಯವಾಗಿದೆ. 9 ಲಕ್ಷಕ್ಕೂ ಅಧಿಕ ನಿಷೇಧಿತ ಮಾದಕ ದೃವ್ಯ ಪೊಲೀಸರು ಪತ್ತೆಹಚ್ಚಿದ್ದಾರೆ. ಅಶ್ಲೀಲವಾಗಿ ಕುಣಿಯುವ ಡಿಜೆ ಪಾರ್ಟಿಯಲ್ಲಿ Sajanka ಹಿಂದೂ ದೇವರ ಅವಹೇಳನ ಮಾಡುತ್ತಿದ್ದಾನೆ. ಒಂದು ವೇಳೆ ನಿಲ್ಲಿಸದೇ ಇದ್ರೆ ಸ್ಥಳೀಯರ ಜೊತೆ ಸೇರಿ ಸಂಜೆ ಪ್ರತಿಭಟನೆ ಮಾಡುತ್ತೇವೆ. ಕಾನೂನಾತ್ಮಕವಾಗಿ ಕಾರ್ಯಕ್ರಮ ತಡೆದೇ ತಡೆಯುತ್ತೇವೆ ಎಂದಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಕಾರ್ಯಕ್ರಮ ರದ್ದಾಗಿದೆ.