ಹುಬ್ಬಳ್ಳಿ: ಉಗ್ರರನ್ನು ಮಟ್ಟ ಹಾಕುವ ವಿಚಾರದಲ್ಲಿ ಭಾರತ ದೇಶದ 140 ಕೋಟಿ ಜನರ ಬೆಂಬಲವೂ ಪ್ರಧಾನ ನರೇಂದ್ರ ಮೋದಿ ಅವರಿಗಿದೆ. ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲ ಸಮುದಾಯದ ಬೆಂಬಲವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ಮುಗಿಸಬೇಕು, ಧ್ವಂಸ ಮಾಡಬೇಕು, ಅಟ್ಯಾಕ್ ಮಾಡಬೇಕು, ನುಗ್ಗಿ ಹೊಡೆಯಬೇಕು ಅಷ್ಟೇ. ಏನು ಮಾಡಿದರೂ ದೇಶದ ಎಲ್ಲ ರಾಜಕೀಯ ಪಕ್ಷಗಳು ಅವರ ಪರವಾಗಿವೆ ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ದಾಟಿಯಲ್ಲಿ `ಯುದ್ಧ ಬೇಡ’ ಎಂದಿದ್ದಾರೆ ಎಂಬುದನ್ನು ಅರ್ಥ ಮಾಡಕೊಳ್ಳಬೇಕು. ಸಿದ್ದರಾಮಯ್ಯ ಅಂತೆಯೇ ಪಿಯೂಷ್ ಗೋಯೆಲ್ ಕೂಡ ಹೇಳಿಕೆ ನೀಡಿದ್ದರು. ಅದನ್ನೇಕೆ ದೊಡ್ಡದು ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂತಹ ಘಟನೆಗಳನ್ನು ಸಮರ್ಥಿಸಿಕೊಳ್ಳುವವರಲ್ಲ ಎಂದು ಸಮಜಾಯಿಷಿ ನೀಡಿದರು.
ಪಾಕಿಸ್ತಾನದ ಒಳಗಾದರೂ ಹೋಗಲಿ, ಹೊರಗಾದರೂ ಹೊಡೆಯಲಿ. ಏನು ಮಾಡಬೇಕೋ ಅದನ್ನು ಮಾಡಲಿ. ಈ ಸಂಬಂಧ ನಾನು ಕೂಡ ಅಮಿತ್ ಶಾ ಜೊತೆಗೆ ಮಾತನಾಡಿದ್ದೇನೆ. ಪಾಕಿಸ್ತಾನವನ್ನು ಮುಗಿಸಲೇಬೇಕು. ಪ್ರಧಾನಿ ತೆಗೆದುಕೊಂಡ ನಿರ್ಧಾರಕ್ಕೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲ ನೀಡಲಿದ್ದೇವೆ ಎಂದು ಪ್ರತಿಕ್ರಿಯಿಸಿದರು.