ಬೆಂಗಳೂರು: ರಾಜ್ಯ ಸರಕಾರ “ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ಮಸೂದೆ-2025′ ಅನ್ನು ಜಾರಿಗೊಳಿಸಲು ಮುಂದಾಗಿದ್ದು, ಇದನ್ನು ಬುಧವಾರ ಮಂಡಿಸಲಾಯಿತು. ಇದರಡಿಯಲ್ಲಿ ಇನ್ಮುಂದೆ ಅನುಮತಿ ಪಡೆಯದೆ ಕಾರ್ಯಕ್ರಮಗಳನ್ನು ಆಯೋಜಿಸುವವರ ವಿರುದ್ಧ 1 ಕೋಟಿ ರೂ. ವರೆಗೂ ದಂಡ ಹಾಗೂ ಮೂರರಿಂದ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಮಸೂದೆಯನ್ನು ಸದನದಲ್ಲಿ ಪರ್ಯಾಲೋಚನೆಗಾಗಿ ಮಂಡಿಸಿದರು. ಅದರಂತೆ ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸುವವರು ಹಾಗೂ ಜನಸಂದಣಿ ವಿಪತ್ತಿಗೆ ಕಾರಣರಾಗುವವರ ವಿರುದ್ಧ ಗರಿಷ್ಠ ಮಟ್ಟದ ದಂಡ ಮತ್ತು ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ. ಅನುಮತಿ ಪಡೆಯದೆ ಯಾವುದೇ ಕಾರ್ಯಕ್ರಮವನ್ನು ಯಾರಾದರೂ ಆಯೋಜಿಸಿದರೆ ಅಥವಾ ಆಯೋಜಿಸಲು ಯತ್ನಿಸಿದರೆ ಕನಿಷ್ಠ 3ರಿಂದ 7 ವರ್ಷಗಳ ಕಾಲ ಜೈಲು ಶಿಕ್ಷೆ ಅಥವಾ 1 ಕೋಟಿ ರೂ.ವರೆಗೆ ದಂಡ ಅಥವಾ ಇವೆರಡನ್ನೂ ವಿಧಿಸಲಾಗುತ್ತದೆ.
ಒಂದು ವೇಳೆ ಜನಸಂದಣಿ ವಿಪತ್ತಿಗೆ ಕಾರಣರಾಗುವ ಅಥವಾ ಈ ವಿಪತ್ತಿನ ಬಗ್ಗೆ ನಿರ್ಲಕ್ಷ್ಯ ಅಥವಾ ಅಜಾಗರೂಕತೆ ಮಾಡಿದ ವ್ಯಕ್ತಿ ಅಥವಾ ವ್ಯಕ್ತಿಗಳ ವಿರುದ್ಧವೂ ಶಿಕ್ಷೆ ವಿಧಿಸಲಾಗುತ್ತದೆ. ಜನಸಂದಣಿ ವಿಪತ್ತಿನಿಂದ ಪ್ರಾಣಹಾನಿಯಾದರೆ ಅದಕ್ಕೆ ಕಾರಣವಾದ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಒಂದು ವೇಳೆ ಜನಸಂದಣಿಯಲ್ಲಿ ದೈಹಿಕವಾಗಿ ಗಾಯಗೊಂಡರೆ ಅದಕ್ಕೆ ಕಾರಣರಾದವ ವಿರುದ್ಧ ಮೂರರಿಂದ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.