ಚಿತ್ರದುರ್ಗ: ಚಿತ್ರದುರ್ಗದ ಮೆದೆಹಳ್ಳಿ ರೈಲ್ವೆ ಕೆಳ ಸೇತುವೆ ಬಳಿ ವರ್ಷಕ್ಕೆ ಎರಡು ಬಾರಿ ಗುಂಡಿ ಬಿದ್ದು, ನೀರು ತುಂಬಿಕೊಂಡು, ವಾಹನ ಚಾಲಕರಿಗೆ ಅಪಘಾತಗಳನ್ನು ಉಂಟು ಮಾಡುತ್ತಿರುವುದು ವರ್ಷಕ್ಕೆ ಎರಡು ಬಾರಿ ಅವಿರತವಾಗಿ ನಡೆದ ಇದೆ.
ಎಷ್ಟು ಸಾರಿ ಅದನ್ನ ಸರಿಪಡಿಸಿದರು ಸಹ, ಮಳೆಗಾಲದಲ್ಲಿ ನೀರು ನಿಂತು, ಗುಂಡಿಯಾಗಿ, ರಸ್ತೆಗಳು ಕಾಣದಂತಾಗಿ, ವಾಹನ ಚಾಲಕರು ಬಿದ್ದು, ಕೈ ಕಾಲು ಮುರಿದುಕೊಳ್ಳುವ ಸಂಭವಗಳು ಇವೆ. ಯಾವುದೇ ದೊಡ್ಡ ಅಪಘಾತ ಆಗದೆ, ಜನರು ಬದುಕುಳಿದಿದ್ದಾರೆ. ಇನ್ನು ಮುಂದಾದರೂ ರೈಲ್ವೆ ಇಲಾಖೆ ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸಿ, ಸಮರ್ಪಕವಾದಂತ, ಬಲಿಷ್ಠವಾದಂತ ಕಾಂಕ್ರೀಟಿಗಿಂತ ಬಲಿಷ್ಠವಾದಂತ, ಬಂಡೆ ಕಲ್ಲುಗಳನ್ನು ಹಾಕಿ, ಗುಂಡಿ ಬೀಳದಂತೆ, ಮಳೆಗಾಲದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಗೊಳಿಸಬೇಕೆಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ವಿನಂತಿಸಿಕೊಂಡಿದ್ದಾರೆ.
ವರ್ಷಕ್ಕೆ ಎರಡು ಬಾರಿ ಮಳೆಗಾಲದಲ್ಲಿ ನೀರು ತುಂಬಿ ತುಳುಕಿ, ಅತಿಯಾದ, ಭಾರವಾದಂತಹ ವಾಹನಗಳು ಸಂಚರಿಸುತ್ತಿರುವುದರಿಂದ, ಯಾವುದೇ ಕಾಂಕ್ರೀಟ್ ಸಹ ಮಳೆಗಾಲದಲ್ಲಿ ತಡೆದುಕೊಳ್ಳಲಾರದೆ, ಆಳವಾದ ಗುಂಡಿಗಳು ಏರ್ಪಟ್ಟ, ಅಲ್ಲಿ ನೀರು ತುಂಬಿಕೊಂಡಾಗ ದ್ವಿಚಕ್ರ ವಾಹನಗಳಿಗೆ ಎತ್ತ ಹೋಗಬೇಕು ಎಂಬುದು ಗೊತ್ತಾಗದೆ, ಗುಂಡಿ ಒಳಗಡೆ ಇಳಿದು, ಮುಗ್ಗರಿಸಿ ಬೀಳುವ ಸಂಭವಗಳು ಹೆಚ್ಚಾಗಿರುತ್ತದೆ, ಆದ್ದರಿಂದ ಇದರ ರಿಪೇರಿಯ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮ ಜರುಗಿಸಿ, ಪ್ರತಿ ವರ್ಷಕ್ಕೆ ಎರಡು ಬಾರಿ ಇದಕ್ಕೆ ಬಲಿಷ್ಠವಾದ ಕಾಂಕ್ರೀಟನ್ನ ಹಾಕಿ, ರಸ್ತೆಯನ್ನು ಸರಿಪಡಿಸುತ್ತಿರಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ದಿನಕ್ಕೆ ನೂರಾರು ಬಸ್ಸುಗಳು, ಲಾರಿಗಳು ಸಂಚರಿಸುವ ಈ ಕೆಳ ಸೇತುವೆ ಬಳಿ ಮಳೆ ನೀರು ನಿಂತಾಗ, ಎಂತ ಬಲಿಷ್ಠವಾದ ಕಾಂಕ್ರೀಟ್ ಸಹ, ಕರಗಿ, ಉದುರಿ, ಸುಲಭವಾಗಿ ಕಿತ್ತು ಹೋಗುವ ಸಂಭವವಿರುತ್ತದೆ. ಹಾಗಾಗಿ ಇಂಜಿನಿಯರ್ ಗಳು, ತಾಂತ್ರಿಕ ತಜ್ಞರು ಇಂತಹ ಕೆಲಸ ವಿಭಿನ್ನವಾದಂತ ಕಾಂಕ್ರೀಟು ಅಥವಾ ಬಲಿಷ್ಠವಾದ ಬಂಡೆಕಲ್ಲುಗಳನ್ನ ಕತ್ತರಿಸಿ ತಂದು ಹಾಕಿ, ಹತ್ತಾರು ವರ್ಷ ಯಾವುದೇ ರಿಪೇರಿ ಬರದಂಗೆ ಮಾಡಿದರೆ ಮಾತ್ರ ನಾವು ವೈಜ್ಞಾನಿಕವಾಗಿ ಮುಂದುವರಿದಿದ್ದೇವೆ ಎಂಬುದು ಅರ್ಥವಾಗುತ್ತದೆ ಎಂದರು.
ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರಿದ್ದರು ಸಹ, ಇನ್ನೂ ಕೆಳ ಸೇತುವೆಗಳಲ್ಲಿರುವ ನೀರನ್ನು ಎತ್ತಿ ಹಾಕುವ ವ್ಯವಸ್ಥೆಯನ್ನ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಕಾರಣಾಂತರಗಳಿಂದ ಕಾರ್ಮಿಕರು ಕೈ ಕೊಟ್ಟಿರುತ್ತಾರೆ, ಮೋಟಾರ್ ಗಳು ಕೆಟ್ಟು ಹೋಗುತ್ತವೆ, ಕರೆಂಟ್ ಕೈಕೊಟ್ಟಿರುತ್ತದೆ, ರಿಪೇರಿ ಆಗಿರುವುದಿಲ್ಲ, ನೀರು ಕೆಳ ಸೇತುವೆ ಬಳಿ ಸಂಗ್ರಹವಾಗುತ್ತದೆ. ಅದನ್ನು ಎತ್ತಿ ಹೊರ ಹಾಕುವ ವ್ಯವಸ್ಥೆ ಇಲ್ಲದಿದ್ದರೆ, ನೀರಿನ ಮೇಲೆ ಚಲಿಸುವ ವಾಹನಗಳಿಂದ ಎಂತಹ ಬಿಗಿಯಾದ ರಸ್ತೆಯು ಸಹ ಒಡೆದುಕೊಂಡು, ಚೂರು ಚೂರಾಗಿ, ಗುಂಡಿಗಳು ಬೀಳುತ್ತವೆ. ಗುಂಡಿಗಳಿಗೆ ಸಾಧ್ಯವಾದಷ್ಟು ಮಣ್ಣನ್ನು, ಮಣ್ಣಿಗಿಂತ ಜಲ್ಲಿಕಲ್ಲುಗಳನ್ನು ಹಾಕಿ ಮುಚ್ಚಿ, ಮಳೆಗಾಲ ಮುಗಿದ ತಕ್ಷಣ, ಅದಕ್ಕೆ ಬಲಿಷ್ಠವಾದ ಕಾಂಕ್ರೀಟ್ ಅನ್ನ ಹಾಕಿ, ಅದು ಒಣಗುವವರೆಗೂ ವಾಹನಗಳನ್ನು ಬೇರೆ ದಾರಿಯಲ್ಲಿ ಕಳುಹಿಸಿ, ಬಲಿಷ್ಠಗೊಂಡಾಗ ನಂತರ ಮಾತ್ರ ವಾಹನಗಳನ್ನು ಬಿಡಬೇಕಾದಂತ ಏರ್ಪಾಡು ಮಾಡಿಕೊಳ್ಳಬೇಕಾಗಿದೆ, ಇಲ್ಲದಿದ್ದರೆ ಕಾಂಕ್ರೀಟ್ ಹಾಕಿ ಎರಡೇ ದಿವಸಕ್ಕೆ ವಾಹನಗಳ ಚಲಾಯಿಸುವುದರಿಂದ, ಕಾಂಕ್ರೀಟ್ ಗಳು ಉದುರಿ ಮತ್ತೆ ಗುಂಡಿಗಳು ಬೀಳುತ್ತವೆ. ಇದರ ಬಗ್ಗೆ ರೈಲ್ವೆ ಇಲಾಖೆ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಬಹಳಷ್ಟು ವಯಸ್ಸಾದವರು, ಮಹಿಳೆಯರು ಅಥವಾ ಗಾಡಿಯ ನಿಯಂತ್ರಣವಿಲ್ಲದೆ ಚಲಾಯಿಸುವಂತಹ ಯುವ ಜನಾಂಗ, ಇಂತಹ ಗುಂಡಿಗಳಲ್ಲಿ ಬಂದು ಮುಗ್ಗರಿಸಿ ಬಿದ್ದು, ಹಿಂದೆ ಬರುವ ವಾಹನಗಳಿಗೆ ಸಿಕ್ಕು ಪ್ರಾಣ ಕಳೆದುಕೊಳ್ಳುವ ಸಂಭವಗಳು ಹೆಚ್ಚಾಗಿರುತ್ತದೆ ಎಂಬುದನ್ನು ನೋಡಿದವರಿಗೆ ತಿಳಿಯುತ್ತದೆ. ಅಂತಹ ಅಗಾಧವಾದ ಗುಂಡಿಗಳು ನೀರಿನಲ್ಲಿ ಮುಚ್ಚಿಕೊಂಡಾಗ, ಕಣ್ಮುಚ್ಚಿಕೊಂಡು ರಸ್ತೆಗಳಲ್ಲಿ ಚಲಾಯಿಸಿದಂತೆ ವಾಹನ ಚಲಾಯಿಸಬೇಕಾಗುತ್ತದೆ. ಗುಂಡಿ ಎಷ್ಟು ಆಳವಿದೆ ಎಂಬುದು ಸಹ ಚಾಲಕರಿಗೆ ಅರಿವಾಗುವುದಿಲ್ಲ, ಹಾಗಾಗಿ ಇಂತ ಗುಂಡಿಗಳನ್ನು ಆದಷ್ಟು ಶೀಘ್ರವಾಗಿ ಮುಚ್ಚಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕೆಂದು ಅಧಿಕಾರಿಗಳಿಗೆ, ರೈಲ್ವೆ ಇಲಾಖೆಗೆ ವಿನಂತಿಸಿಕೊಂಡಿದ್ದಾರೆ.
ಜನರು ಸಹ ಸಾಕಷ್ಟು ಗುಂಡಿಗಳಿದ್ದರೂ ಸಹ ಅವುಗಳ ಮೇಲೆ ವಾಹನ ಚಲಾಯಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ, ಅವರ ಕಷ್ಟ ಸಹಿಷ್ಣತೆಯನ್ನ ಮೆಚ್ಚಿಕೊಳ್ಳಲೇಬೇಕು, ಯಾವುದಕ್ಕೂ ಸಹ ಸರ್ಕಾರಕ್ಕೆ ಬಲವಂತ ಮಾಡದೆ, ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಪ್ರಾಣ ಕಳೆದುಕೊಂಡಾಗ ಮಾತ್ರ ಒಂದಿಷ್ಟು ಚೀರಾಡಿ, ಕೂಗಾಡಿ, ಸುದ್ದಿ ಮಾಡಿ, ಪಕ್ಕಕ್ಕೆ ಸರಿಯುತ್ತಿದ್ದಾರೆ. ತಿಳಿದಂತವರು, ಶಿಕ್ಷಣವಂತರು, ಜವಾಬ್ದಾರಿ ಉಳ್ಳವರು ಇಂತಹ ರಸ್ತೆಗಳನ್ನ ಕ್ರಮಬದ್ಧವಾಗಿ ಸರಿಪಡಿಸಿಕೊಂಡು, ಜನರ ಪ್ರಾಣದ ಜೊತೆ ಆಟವಾಡದೆ, ಅವರ ಪ್ರಾಣವನ್ನ ರಕ್ಷಿಸುವಂತ ಕೆಲಸವನ್ನು ಮಾಡಬೇಕೆಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.