ರಾಮನಗರ : ರಾಜ್ಯ ರಾಜಕಾರಣದ ಪರಿಸ್ಥಿತಿ ಹದಗೆಟ್ಟಿದೆ. ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ಸರ್ಕಾರದ ಆಡಳಿತ ಇದೆ. ಇಂತಹ ಕೆಟ್ಟ ಸರ್ಕಾರವನ್ನ ನಾವು ಎಂದೂ ನೋಡಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಆಗದೇ ಹಣ ಹೊಡೆಯೋದು, ಹನಿಟ್ರ‍್ಯಾಪ್, ಪೋನ್ ಟ್ರ‍್ಯಾಪ್ ಬಗ್ಗೆ ಚರ್ಚೆ ಆಗುತ್ತಿದೆ. ಇಲ್ಲಿಯ ತನಕ ಸರ್ಕಾರ ಇರಲೇ ಬಾರದಿತ್ತು. ಹನಿಟ್ರ‍್ಯಾಪ್‌ನಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ. ಇದ್ದಿದ್ದರೇ ಸರ್ಕಾರ ಇಷ್ಟೊತ್ತಿಗೆ ತನಿಖೆಗೆ ಮುಂದಾಗುತ್ತಿತ್ತು ಎಂದು ಹೇಳಿದರು.
ಈಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ‍್ಯಾಪ್ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರ ವಿರುದ್ಧ ಹನಿಟ್ರ‍್ಯಾಪ್ ಮಾಡುವ ಕೆಲಸ ಆಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತೇ ಆಡುತ್ತಿಲ್ಲ. ತನಿಖೆ ಮಾಡುತ್ತೇವೆ ಅನ್ನೋದು ಬಿಟ್ಟರೆ ಇನ್ನೇನು ಹೇಳಿಲ್ಲ. ಸಿಎಂ ಸಿದ್ದರಾಮಯ್ಯರದ್ದೂ ಹನಿಟ್ರ‍್ಯಾಪ್ ಆಗಿರುವ ಅನುಮಾನ ಇದೆ. ತನಿಖೆ ಆದರೆ ಇವರದ್ದೂ ಎಲ್ಲಿ ಆಚೆ ಬರುತ್ತೋ ಎಂಬ ಭಯ. ಅದಕ್ಕಾಗಿ ಸಿಎಂ ಈ ಬಗ್ಗೆ ತನಿಖೆಗೆ ಸೂಚಿಸುತ್ತಿಲ್ಲ ಎಂದರು.