ಧಾರವಾಡ : ಚಿಕನ್ ಬಾರ್ಬೆಕ್ಯೂ ಮಾಡಲು ಹಚ್ಚಿದ್ದ ಒಲೆಯ ಹೊಗೆ ರೂಮ್ ತುಂಬಾ ಆವರಿಸಿ ಓರ್ವ ಸಾವನ್ನಪ್ಪಿ, 6 ಮಂದಿ ಅಸ್ವಸ್ಥರಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ನೇಪಾಳ ಮೂಲದ ಬಿಬೇಕ್ ಮೃತ ವ್ಯಕ್ತಿ. ಅಸ್ವಸ್ಥರಾದವರನ್ನು ನರೇಶ (45), ನಿತೇಶ್ (18), ಡಿಕೆಶಿ (40), ಸುಧನ್ (30), ಕುಮಾರ್ (50) ಮತ್ತು ಲಕ್ಷ್ಮಣ್ (30) ಎಂದು ಗುರುತಿಸಲಾಗಿದೆ.
ಇವರೆಲ್ಲರು ನೇಪಾಳ ಮೂಲದವರಾಗಿದ್ದು, ಧಾರವಾಡದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಧಾರವಾಡದ ಕೆಎಂಎಫ್ ಬಳಿಯ ನಂದಿನಿ ಲೇಔಟ್ನ ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ಜ.9ರ ರಾತ್ರಿ ಈ ಏಳೂ ಜನ ಕೆಲಸಗಾರರು ತಾವು ವಾಸವಿದ್ದ ಮನೆಯಲ್ಲಿ ಬಾರ್ಬೆಕ್ಯೂ ಮಾಡಲು ತಂದೂರಿ ರೊಟ್ಟಿ ಮಾಡುವ ಒಲೆ ಹೊತ್ತಿಸಿದ್ದರು. ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದರು. ಆದರೆ, ಒಲೆಯಿಂದ ಹೊಗೆ ಆವರಿಸಿ ಏಳೂ ಜನರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಬೆಳಗಿನವರೆಗೂ ಏಳೂ ಜನ ಮಲಗಿದ ಜಾಗದಲ್ಲೇ ಮಲಗಿದ್ದರು. ಬೆಳಿಗ್ಗೆ ಕೆಲಸಗಾರರು ಬರದೇ ಇದ್ದಾಗ ಮಾಲೀಕರೇ ಸ್ಥಳಕ್ಕೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಎಲ್ಲರನ್ನೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
































