ನವದೆಹಲಿ : ಸಂಸತ್‌ನ ಚಳಿಗಾಲದ ಅಧಿವೇಶನ ಇಂದು (ಡಿಸೆಂಬರ್ 1) ಆರಂಭಗೊಳ್ಳಲಿದ್ದು, ಡಿಸೆಂಬರ್ 19ರಂದು ಸಂಪನ್ನಗೊಳ್ಳಲಿದೆ. 19 ದಿನಗಳ ಅವಧಿಯಲ್ಲಿ ಒಟ್ಟು 15 ಕಲಾಪಗಳು ನಡೆಯಲಿದ್ದು, ಕೇಂದ್ರ ಮತ್ತು ವಿಪಕ್ಷಗಳ ನಡುವಿನ ರಾಜಕೀಯ ತೀವ್ರತೆ ಈ ಬಾರಿಯ ಅಧಿವೇಶನಕ್ಕೆ ವಿಶೇಷ ಬಣ್ಣ ನೀಡಲಿದೆ.
ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿವೆ. ಜೊತೆಗೆ ಚುನಾವಣಾ ಆಯೋಗ ನಡೆಸುತ್ತಿರುವ ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪ ಮತ್ತು ಅಕ್ರಮಗಳನ್ನು ಎತ್ತಿತೋರಿಸಲು ಸಜ್ಜಾಗಿವೆ. ವಿಪಕ್ಷಗಳು SIR ಪ್ರಕ್ರಿಯೆಯಲ್ಲಿ ಅಕ್ರಮ, ಅನ್ಯಾಯ ಹಾಗೂ ಕೇಂದ್ರ ಸರ್ಕಾರದ ಪ್ರಭಾವವಿದೆ ಎಂದು ವಾದಿಸುತ್ತಿದ್ದು, ಈ ವಿಚಾರವನ್ನು ಸಂಸತ್‌ನಲ್ಲಿ ಜೋರಾಗಿ ಪ್ರಸ್ತಾಪಿಸುವ ಯೋಜನೆ ಮಾಡಿಕೊಂಡಿವೆ.
ಕಲಾಪಗಳ ವಿಶೇಷತೆ:
15 ಕಲಾಪಗಳು – 19 ದಿನಗಳಲ್ಲಿ
ಡಿಸೆಂಬರ್ 5 ಮತ್ತು 19 – ಖಾಸಗಿ ಸದಸ್ಯರ ಮಸೂದೆಗಳು
ಡಿಸೆಂಬರ್ 12 – ಖಾಸಗಿ ಸದಸ್ಯರ ನಿರ್ಣಯಗಳು
ರಾಷ್ಟ್ರಪತಿಯವರ ಶಿಫಾರಸ್ಸಿನಡಿಯಲ್ಲಿ ಆರೋಗ್ಯ ಭದ್ರತೆ ಸೆಸ್ ಮಸೂದೆ, ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, ಮಣಿಪುರ ಜಿಎಸ್‌ಟಿ (ಎರಡನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮುಖ್ಯ ಮಸೂದೆಗಳು ಈ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಚಳಿಗಾಲದ ಅಧಿವೇಶನವು ಕೇಂದ್ರ-ವಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ವೇದಿಕೆ ಸಜ್ಜಾಗಿರುವ ಲಕ್ಷಣಗಳು ಕಾಣಿಸುತ್ತಿವೆ.































