ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದಿಂದಾಗಿ ಹಣ ಕಳೆದುಕೊಂಡ ಎಲ್ಲಾ ಠೇವಣಿದಾರರಿಗೂ ರಂಜಾನ್ ಹಬ್ಬಕ್ಕೂ ಮುನ್ನ ನಿಗದಿತ ಪರಿಹಾರದ ಹಣವನ್ನು ನೀಡಲು ಸೂಕ್ತ ಕ್ರಮವಹಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಐಎಂಎ ಹಗರಣದ ಮೊತ್ತ ಎಷ್ಟು? ಈ ವರೆಗೆ ಈ ಸಂಸ್ಥೆಯ ಎಷ್ಟು ಕೋಟಿ ಮೌಲ್ಯದ ಸ್ಥಿರಾಸ್ತಿ/ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ? ಕಳೆದ ಏಳು ವರ್ಷದಲ್ಲಿ ಈ ಕಂಪೆನಿಯಲ್ಲಿ ಹಣ ಹೂಡಿ ಕಳೆದುಕೊಂಡ ಎಷ್ಟು ಜನರಿಗೆ ಎಷ್ಟು ಪ್ರಮಾಣದಲ್ಲಿ ಹಣ ಹಿಂತಿರುಗಿಸಲಾಗಿದೆ ಮತ್ತು ಉಳಿದ ಸಂತ್ರಸ್ತರಿಗೆ ಯಾವಾಗ ಮತ್ತು ಹೇಗೆ ಹಣ ಹಿಂತಿರುಗಿಸಬೇಕು? ಎಂಬ ಕುರಿತು ವಿಕಾಸಸೌಧ ಇಂದು ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸಭೆ ನಡೀತು, ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ಐಎಂಎ ಹಗರಣದಿಂದ ಹಣ ಕಳೆದುಕೊಂಡ ಹಲವರು ಭಾಗಿಯಾಗಿದ್ದರು. ಈ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ಐಎಂಎ ನಲ್ಲಿ ಹಣ ಹೂಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದರು.
ಕಂಪೆನಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಈಗಾಗಲೇ ಸರ್ಕಾರ ವಶಕ್ಕೆ ಪಡೆದಿದೆ. ಚರಾಸ್ಥಿಗಳ ಮೌಲ್ಯ 106.92 ಕೋಟಿ ಹಾಗೂ ಸ್ಥಿರಾಸ್ತಿಗಳ ಮೌಲ್ಯ 401.92 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕಂಪೆನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ., ನಗದು ಹಣ 11.72 ರೂ. ಹೂಡಿಕೆ ಪತ್ರ 11.06 ಕೋಟಿ ರೂ. ಸೇರಿದಂತೆ ಒಟ್ಟಾರೆ 534.5 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೋಲು ಈಗಾಗಲೇ ಹಾಕಿದೆ. ನ್ಯಾಯಮೂರ್ತಿ ಜಸ್ಟೀಸ್ ನಾಗಪ್ರಸನ್ನ ಪೀಠದ ಆದೇಶದಂತೆ ಶೀಘ್ರವೇ ಈ ಆಸ್ತಿಗಳನ್ನು ಹರಾಜಿಗೊಳಪಡಿಸಿ ಇದರಿಂದ ಬಂದ ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು