ಚಿತ್ರದುರ್ಗ : ಚಿತ್ತಾಪುರ ತಾಲ್ಲೂಕು ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ನೇರ ನುಡಿ, ಸತ್ಯ ಶ್ರೇಷ್ಟ, ಮಹಾನ್ ದಾರ್ಶನಿಕ ಗಂಗೆ ಮಕ್ಕಳ ಕುಲತಿಲಕ ಎಂದೆ ಗುರುತಿಸಿಕೊಂಡಿರುವ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಲು ಹೊರಟಿರುವ ಕಿರಾತಕರನ್ನು ಬಂಧಿಸುವಂತೆ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದ್ದರೂ ಇದುವರೆವಿಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಕೋಲಿ, ಬೆಸ್ತ, ಮೊಗವೀರ, ಗಂಗಾಮತಸ್ಥರು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾದಿತೆಂದು ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದ ಅಧ್ಯಕ್ಷ ಹೆಚ್.ಡಿ.ರಂಗಯ್ಯ ಎಚ್ಚರಿಸಿದರು.
ಜಿಲ್ಲಾ ಗಂಗಾಂಭಿಕ ಬೆಸ್ತರ ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಈ.ಕುಮಾರ್, ರಾಮಚಂದ್ರಪ್ಪ, ಚಂದ್ರು, ಎಲ್.ಮೋಹನ್, ಎಸ್.ಡಿ.ರಾಮಸ್ವಾಮಿ,
ಎಲ್.ಪ್ರಭುದೇವ್, ಹೆಚ್.ಎನ್.ವಿಜಯಕುಮಾರ್, ಬಿ.ಮೂರ್ತಿ, ಕುಬೇಂದ್ರ, ಎಂ.ವರದರಾಜ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.