ತೆಲಂಗಾಣ : ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗುವುದು ಕಷ್ಟಸಾಧ್ಯ. ಐಎಎಸ್ ಅಧಿಕಾರಿ ಅನುದೀಪ್ ದುರಿಶೆಟ್ಟಿ ಅವರು ತಮ್ಮ ಐದನೇ ಪ್ರಯತ್ನದಲ್ಲಿ ಮೊದಲ ರ‍್ಯಾಂಕ್ ಬರೆದು ಟಾಪರ್ ಆಗುತ್ತಾರೆ. ಈ ಮೂಲಕ ಅನೇಕ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ಅನುದೀಪ್ ದುರಿಶೆಟ್ಟಿ ಅವರು ತೆಲಂಗಾಣದ ಶ್ರೀ ಸೂರ್ಯೋದಯ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, 2011ರಲ್ಲಿ ಬಿಐಟಿಎಸ್ ಪಿಲಾನಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ, ಅವರು ಬಹುರಾಷ್ಟ್ರೀಯ ಕಂಪನಿ ಗೂಗಲ್‌ನಲ್ಲಿ ಉತ್ತಮ ವೇತನದ ಉದ್ಯೋಗ ದೊರೆಯಿತು. ಆದರೆ, ಅವರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲವಿತ್ತು.
2012ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅನುದೀಪ್ ಅವರು ಉತ್ತೀರ್ಣರಾಗಲು ವಿಫಲರಾದರು. ಆದಾಗ್ಯೂ, ಅವರು ಭರವಸೆ ಕಳೆದುಕೊಳ್ಳದೆ ಗೂಗಲ್‌ನಲ್ಲಿ ಕೆಲಸ ಮಾಡುತ್ತಲೇ ತಮ್ಮ ತಯಾರಿಯನ್ನು ಮುಂದುವರೆಸಿದರು. 2013ರಲ್ಲಿ ಎರಡನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 790 ರ‍್ಯಾಂಕ್ ನೊಂದಿಗೆ ಐಆರ್‌ಎಸ್ ಅಧಿಕಾರಿಯಾಗುತ್ತಾರೆ. ಕಂದಾಯ ಇಲಾಖೆಯಲ್ಲಿ, ಅವರು ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದರು.
ಐಆರ್‌ಎಸ್ ಅಧಿಕಾರಿಯಾದ ನಂತರವೂ ಅನುದೀಪ್ ಅವರು ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯುವುದನ್ನು ಮುಂದುವರೆಸಿದರು. ಅಂತಿಮವಾಗಿ, ಐದನೇ ಬಾರಿಗೆ 2017ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 1ನೇ ಅಖಿಲ ಭಾರತ ರ‍್ಯಾಂಕ್ ಪಡೆಯುತ್ತಾರೆ. ಈ ಮೂಲಕ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಅವರು ತೆಲಂಗಾಣದ 2018ರ ಬ್ಯಾಚ್ ಅಧಿಕಾರಿಯಾಗಿದ್ದಾರೆ.
ಅನುದೀಪ್ ಅವರು ಭದ್ರಾದ್ರಿ ಕೋತಗುಡೆಂ ಮತ್ತು ಹೈದರಾಬಾದ್‌ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ತೆಲಂಗಾಣದ ಖಮ್ಮಂ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.




























