ನವದೆಹಲಿ : ಬಡತನದ ಬೇಗೆಯಲ್ಲಿ ಬೆಂದರೂ, ತನ್ನ ತಂದೆ-ತಾಯಿಯ ಕಷ್ಟವನ್ನು ಸ್ಫೂರ್ತಿಯಾಗಿಸಿಕೊಂಡು, ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ ಸಫಿನ್ ಹಸನ್ ಯುವಕನ ಸಕ್ಸಸ್ ಸ್ಟೋರಿಯಿದು.
ಇದು ಗುಜರಾತ್ನ ಸಫಿನ್ ಹಸನ್ ಎಂಬ ಯುವಕನ ಬಾಲ್ಯದ ಕಥೆಯಾಗಿದೆ. ಸಫಿನ್ ಅವರ ತಂದೆ-ತಾಯಿ ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಫಿನ್ ಚಿಕ್ಕವರಿದ್ದಾಗಲೇ ಅವರಿಬ್ಬರೂ ಕೆಲಸ ಕಳೆದುಕೊಂಡರು. ತಮ್ಮ ಮಗನ ಭವಿಷ್ಯಕ್ಕಾಗಿ, ಅವರು ಯಾವುದೇ ಕೆಲಸ ಸಿಕ್ಕರೂ ಮಾಡಲು ರೆಡಿ ಇದ್ದರು. ಅಮ್ಮ ಬೇರೆ ಬೇರೆ ಮನೆಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಅಪ್ಪ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಲು ಶುರು ಮಾಡಿದರು.
ರಾತ್ರಿ ಹೊತ್ತು, ಇಡೀ ಕುಟುಂಬ ಸೇರಿ ಬೀದಿಯಲ್ಲಿ ಬೇಯಿಸಿದ ಮೊಟ್ಟೆ ಮಾರುವ ಒಂದು ಸಣ್ಣ ಗಾಡಿಯನ್ನು ನಡೆಸುತ್ತಿದ್ದರು. ಅವರ ಜೀವನವು ನಿರಂತರ ಹೋರಾಟವಾಗಿತ್ತು. ಆದರೆ ಈ ಎಲ್ಲಾ ಕಷ್ಟಗಳ ನಡುವೆ, ಸಫಿನ್ ಒಂದು ದೊಡ್ಡ ಕನಸು ಕಂಡಿದ್ದರು. ಒಂದು ದಿನ, ಅವರ ಶಾಲೆಗೆ ಜಿಲ್ಲಾಧಿಕಾರಿಯೊಬ್ಬರು ಭೇಟಿ ನೀಡಿದರು. ಅವರಿಗೆ ಸಿಗುತ್ತಿದ್ದ ಗೌರವ ಮತ್ತು ಅವರಿಂದ ಆಗುತ್ತಿದ್ದ ಒಳ್ಳೆಯ ಕೆಲಸಗಳನ್ನು ನೋಡಿ, ಸಫಿನ್ ಅವರ ಹೃದಯದಲ್ಲಿ ಒಂದು ಕಿಡಿ ಹೊತ್ತಿಕೊಂಡಿತು. “ನಾನು ಒಬ್ಬ ಅಧಿಕಾರಿಯಾಗಬೇಕು” ಎಂದು ಆ ಕ್ಷಣವೇ ಗಟ್ಟಿಯಾಗಿ ನಿರ್ಧರಿಸಿದರು.
ಅವರ ಶಾಲೆಯು ಸಫಿನ್ ಅವರ ಪ್ರತಿಭೆಯನ್ನು ಗುರುತಿಸಿ, ಕೊನೆಯ ವರ್ಷಗಳಲ್ಲಿ ಉಚಿತವಾಗಿ ಓದಲು ಅವಕಾಶ ಮಾಡಿಕೊಟ್ಟಿತು. ಸಂಬಂಧಿಕರ ಸಹಾಯದಿಂದ ಅವರು ಇಂಜಿನಿಯರಿಂಗ್ ಕಾಲೇಜಿಗೂ ಸೇರಿದರು. 2017 ರಲ್ಲಿ, ಅವರ ಜೀವನದ ಅತ್ಯಂತ ಪ್ರಮುಖ UPSC ಪರೀಕ್ಷೆಯ ದಿನವೇ ಒಂದು ಘೋರ ಅಪಘಾತ ಸಂಭವಿಸಿತು. ಅವರಿಗೆ ತೀವ್ರವಾಗಿ ಗಾಯಗಳಾದವು.
ಬಹುತೇಕರು ಇಂತಹ ಸಮಯದಲ್ಲಿ ತಮ್ಮ ಗುರಿಯನ್ನು ಕೈಬಿಡುವವರೇ ಹೆಚ್ಚು. ಆದರೆ ಸಫಿನ್ ಹಾಗೆ ಮಾಡಲಿಲ್ಲ. ಅವರು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋದರು, ಅತಿಯಾದ ನೋವಿನಲ್ಲೇ ಪರೀಕ್ಷೆ ಬರೆದರು, ಮತ್ತು ಪರೀಕ್ಷೆ ಮುಗಿದ ನಂತರವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರು. ನೋವು ಮತ್ತು ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. ಅಖಿಲ ಭಾರತ ಮಟ್ಟದಲ್ಲಿ 570 ನೇ ರ್ಯಾಂಕ್ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಕೇವಲ 22 ನೇ ವಯಸ್ಸಿನಲ್ಲಿ, ಅವರು ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿಯಾದರು.