ಹರಿಯಾಣ : ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಠಿಣ ಪರಿಶ್ರಮದೊಂದಿಗೆ ದೃಢ ಸಂಕಲ್ಪ ಕೂಡ ಅಗತ್ಯ. ಹೀಗೆ ತನ್ನ ಕಠಿಣ ಪರಿಶ್ರಮದ ಮೂಲಕ ಐಪಿಎಸ್ ಅಧಿಕಾರಿಯಾದ ಪೂಜಾ ಯಾದವ್ ಅವರ ಯಶೋಗಾಥೆ ಇದು.
ಪೂಜಾ ಯಾದವ್ ಅವರು ಹರಿಯಾಣದ ಸೋನಿಪತ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸುತ್ತಾರೆ. ತನ್ನ ಊರಿನಲ್ಲೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಬಯೋಟೆಕ್ನಾಲಜಿಯಲ್ಲಿ ಬಿ.ಟೆಕ್ ಅನ್ನು ಮುಂದುವರಿಸಿದರು. ನಂತರ ಆಹಾರ ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಎಂ.ಟೆಕ್. ಮಾಡಿದ ಬಳಿಕ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಪೂಜಾ ಅವರು ಜರ್ಮನಿ ಮತ್ತು ಕೆನಡಾದಲ್ಲಿ ಸ್ವಲ್ಪ ಕಾಲ ಕೆಲಸ ಮಾಡುತ್ತಾರೆ.
ಆದಾಗ್ಯೂ ಪೂಜಾ ಅವರಿಗೆ ಮತ್ತೊಂದು ರಾಷ್ಟ್ರದ ಬೆಳವಣಿಗೆಗಿಂತ ತನ್ನ ಸ್ವಂತ ದೇಶದ ಬೆಳವಣಿಗೆಗೆ ಕೊಡುಗೆ ನೀಡಬೇಕೆಂಬ ಹಂಬಲ ಉಂಟಾಗುತ್ತದೆ. ಈ ಹಿನ್ನೆಲೆ ಭಾರತಕ್ಕೆ ಮರಳಿದ ಪೂಜಾ ಅವರು, ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ಪೂಜಾ ಅವರ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಾದಿ ಸುಲಭವಾಗಿರಲಿಲ್ಲ. ಈ ವೇಳೆ ತನ್ನನ್ನ ಆರ್ಥಿಕವಾಗಿ ಬೆಂಬಲಿಸುವ ಉದ್ದೇಶದಿಂದ ಪಾರ್ಟ್ ಟೈಮ್ ರಿಸೆಪ್‌ಶನಿಸ್ಟ್ ಆಗಿ ಮತ್ತು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಮೊದಲ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ.
ಬಳಿಕ ಪೂಜಾ ಅವರು 2018ರಲ್ಲಿ ಪುನಃ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, 174ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ನಂತರ ಅವರು ಗುಜರಾತ್ ಕೇಡರ್‌ಗೆ ನಿಯೋಜನೆಗೊಳ್ಳುತ್ತಾರೆ.
ಪ್ರಸ್ತುತ ಪೂಜಾ ಅವರು ಗುಜರಾತ್‌ನ ರಾಜ್‌ಕೋಟ್ ಸಿಟಿಯಲ್ಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಟ್ರಾಫಿಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೂಜಾ ಅವರು 2021ರಲ್ಲಿ ಕೇರಳ ಕೇಡರ್‌ನ ಐಎಎಸ್ ಅಧಿಕಾರಿ ವಿಕಲ್ಪ್ ಭಾರದ್ವಾಜ್ ಅವರನ್ನು ವಿವಾಹವಾಗಿದ್ದಾರೆ.