ಭಾರತೀಯ ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಇದೀಗ ಭಾರತೀಯ ನಾಗರಿಕರಿಗೆ ಶ್ರೇಷ್ಠವಾದ, ಕಡಿಮೆ ಖರ್ಚಿನ ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸಿದೆ. 756 ರೂ. ಮಾತ್ರದಲ್ಲಿ ರೂ. 15 ಲಕ್ಷವರೆಗೆ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಲಭ್ಯವಿರುವ ಈ ಯೋಜನೆ, ಗ್ರಾಮೀಣ ಮತ್ತು ನಗರ ಎಲ್ಲ ಜನರಿಗೂ ನೇರವಾಗಿ ಲಾಭ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಕೊರೊನಾ ಸಾಂಕ್ರಾಮಿಕ ನಂತರ ಭಾರತದಲ್ಲಿ ಆರೋಗ್ಯದ ಮೇಲಿನ ಜಾಗೃತಿ ಹೆಚ್ಚಾಗಿದೆ. ಆದರೆ ಆಸ್ಪತ್ರೆ ವೆಚ್ಚಗಳು ಕೂಡಾ ಅತಿರೇಕವಾಗಿ ಏರಿಕೆಯಾಗಿದ್ದು, ಸಾಮಾನ್ಯ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭಾರವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅಂಚೆ ಇಲಾಖೆ ಭಾರತದಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ದರದಲ್ಲಿ ರೂ. 15 ಲಕ್ಷದ ವಿಮಾ ಭದ್ರತೆ ನೀಡುವ ‘ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ’ಯನ್ನು ಪ್ರಾರಂಭಿಸಿದೆ.
ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?: ಈ ಯೋಜನೆ ಟಾಪ್-ಅಪ್ ಪ್ಲ್ಯಾನ್ ಮೇಲೆ ನಡೆಯುತ್ತದೆ. ಅಂದರೆ, ನಿಮಗೆ ಆಯುಷ್ಮಾನ್, ಖಾಸಗಿ ಇನ್ಶೂರೆನ್ಸ್ ಅಥವಾ ಯಾವುದಾದರೂ ರೂಪದಲ್ಲಿ ಮೊದಲ ರೂ. 2 ಲಕ್ಷದ ವೆಚ್ಚವನ್ನು ನೀವು ಭರಿಸುವ ಅಗತ್ಯವಿದೆ. ಆದರೆ ಅದನ್ನು ಮೀರಿದ ಆಸ್ಪತ್ರೆ ವೆಚ್ಚಗಳನ್ನು ರೂ. 15 ಲಕ್ಷದವರೆಗೆ ಈ ಯೋಜನೆ ಭರಿಸುತ್ತದೆ.
ಇದಕ್ಕೆ ಜೊತೆಯಾಗಿ, ನೀವು ಅಂಚೆ ಇಲಾಖೆ ನೀಡುವ ರೂ. 2 ಲಕ್ಷದ ಸಾಮಾನ್ಯ ಆರೋಗ್ಯ ವಿಮಾ (ವರ್ಷಕ್ಕೆ ರೂ. 4,800 – 40 ವರ್ಷದೊಳಗಿನವರಿಗೆ) ಜೊತೆಗೆ ಈ ಯೋಜನೆಯನ್ನು ಒಟ್ಟು ರೂ. 5,556ರ ಪ್ಲ್ಯಾನ್ನಲ್ಲಿ ಪಡೆದುಕೊಂಡರೆ, ರೂ. 17 ಲಕ್ಷದ ವಿಮಾ ನಿಮ್ಮದಾಗುತ್ತದೆ.
ಅಂಚೆ ಇಲಾಖೆಯ ಈ ಹೊಸ ಹೆಲ್ತ್ ಇನ್ಶೂರೆನ್ಸ್ ಯೋಜನೆ, ಭಾರತೀಯ ಆರೋಗ್ಯ ವಿಮಾದಲ್ಲಿ ಹೊಸ ಪ್ರಯತ್ನ. ರೂ. 756ರಲ್ಲಿ ರೂ. 15 ಲಕ್ಷದ ವಿಮಾ ಪಡೆಯುವುದು ಒಂದು ಕ್ರಾಂತಿಕಾರಿ ಹೆಜ್ಜೆ. ಆರೋಗ್ಯದ ಹಕ್ಕನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ನೀಡುವ ಸಾರ್ಥಕ ಪ್ರಯತ್ನ ಇದಾಗಿದೆ. ಸಾಮಾನ್ಯ ಕುಟುಂಬಗಳು, ಖಾಸಗಿ ಯೋಜನೆಗಳಿಗೆ ಹಣವಿಲ್ಲದೆ ಇರುವವರು, ಗ್ರಾಮೀಣ ಜನತೆ ಎಲ್ಲರಿಗೂ ಈ ಯೋಜನೆಯು ಅನುಕೂಲಕರವಾಗಲಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಕೆ.ಸುಧಾಕರ ಮಲ್ಯ, “ಅಂಚೆ ಇಲಾಖೆಯಲ್ಲಿ ಐಪಿಪಿಬಿ ಮತ್ತು ಖಾಸಗಿ ವಿಮಾ ಸಂಸ್ಥೆಯೊಂದಿಗೆ ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ. 15 ಲಕ್ಷ ರೂ. ವಿಮಾ ಮೊತ್ತ ನೀಡಲಾಗುತ್ತದೆ. ಇದರಲ್ಲಿ ಮೊದಲ 2 ಲಕ್ಷವನ್ನು ವಿಮೆ ಪಡೆದವರೇ ಭರಿಸಬೇಕಾಗುತ್ತದೆ. 2 ಲಕ್ಷದ ಮೇಲೆ 15 ಲಕ್ಷ ರೂ.ವರೆಗೆ ವಿಮೆಯನ್ನು ಕ್ಯಾಶ್ ಲೆಸ್ ಆಗಿ ಇದರಲ್ಲಿ ಪಡೆಯಬಹುದು” ಎಂದು ಹೇಳಿದರು.