ನವದೆಹಲಿ : ಯೆಮೆನ್ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿದೆ. ಯೆಮನ್ನಲ್ಲಿ ಮರಣದಂಡನೆ ಶಿಕ್ಷೆಯಲ್ಲಿರುವ ಭಾರತೀಯ ನರ್ಸ್ನ ಮರಣದಂಡನೆಯನ್ನು ತಡೆಯಲು ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳಿಗೆ ಹೆಚ್ಚಿನ ಸಮಯವನ್ನು ನೀಡಲಾಗಿದೆ.
ಭಾರತೀಯ ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯಿಂದ ಹಿನ್ನಡೆಯಾದ ನಂತರ ಈ ಮುಂದೂಡಿಕೆಯಾಗಿದೆ. ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಭಾರತ ಸರ್ಕಾರ ಆಕೆಯನ್ನು ಉಳಿಸಲು ತಮಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದಿದೆ.
ಪ್ರಿಯಾಳ ತಾಯಿ ಪ್ರೇಮಕುಮಾರಿ ಕಳೆದ ವರ್ಷ ತನ್ನ ಮಗಳ ಬಿಡುಗಡೆಗಾಗಿ ಮನವಿ ಮಾಡಲು ಯೆಮೆನ್ಗೆ ಪ್ರಯಾಣ ಬೆಳೆಸಿದ್ದರು. ಕೇರಳದ ಸುನ್ನಿ ಧರ್ಮಗುರು ಒಬ್ಬರು ಪ್ರಮುಖ ಯೆಮೆನ್ ಧಾರ್ಮಿಕ ವಿದ್ವಾಂಸರನ್ನು ಸಂಪರ್ಕಿಸಿ ಮಧ್ಯಪ್ರವೇಶ ಕೋರಿದರು.
ಈ ಪ್ರಯತ್ನಗಳ ಹೊರತಾಗಿಯೂ, ಯೆಮೆನ್ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳ ಕೊರತೆಯಿಂದಾಗಿ ಅಡೆತಡೆಗಳು ಮುಂದುವರೆದಿವೆ. ಪ್ರಿಯಾಳನ್ನು ರಕ್ಷಿಸಲು ಕೇಂದ್ರವು ರಾಜತಾಂತ್ರಿಕ ಮಾರ್ಗಗಳನ್ನು ಸಕ್ರಿಯವಾಗಿ ಅನುಸರಿಸಬೇಕೆಂದು ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ವಿದೇಶದಲ್ಲಿರುವ ಭಾರತೀಯ ನಾಗರಿಕರನ್ನು ಉಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳುತ್ತಿದ್ದರೂ, ಯೆಮೆನ್ನಲ್ಲಿ ಭಾರತದ ಪ್ರಭಾವ ಸೀಮಿತವಾಗಿದೆ ಎಂದು ಅಧಿಕಾರಿಗಳು ಪುನರುಚ್ಚರಿಸಿದರು.
ನಿಮಿಷಾ ಪ್ರಿಯಾ ಬಿಜಿನೆಸ್ ಪಾರ್ಟ್ನರ್ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾಳೆ. ನಿಮಿಷಾ ಹೇಳಿಕೆ ಪ್ರಕಾರ ಆತ ಆಕೆ ನಿರಂತರ ಕಿಡುಕುಳ ನೀಡುತ್ತಿದ್ದ. ನಕಲಿ ವಿವಾಹ ದಾಖಲೆ ಕೂಡ ಮಾಡಿಸಿದ್ದ. ಹಾಗೆಯೇ ಬ್ಲಡ್ ಮನಿ ನೀಡಲು ಆಕೆಯ ಕುಟುಂಬವು ಮೃತರ ಕುಟುಂಬವನ್ನು ಸಂಪರ್ಕಿಸಿತ್ತು, ಆದರೆ ಅವರು ಒಪ್ಪಿಕೊಂಡಿಲ್ಲ.
 
				 
         
         
         
															 
                     
                     
                     
                     
                    


































 
    
    
        