ಪೊಲೀಸ್ ಅಧಿಕಾರಿಗಳು ಸ್ವೀಕರಿಸಿದ ಮಾಹಿತಿಯು ಮೇಲ್ನೋಟಕ್ಕೆ ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸಿದರೆ, ಆಗ ಆ ಪೊಲೀಸ್ ಅಧಿಕಾರಿಯು ಪ್ರಥಮ ವರ್ತಮಾನ ವರದಿ (ಎಫ್‌ಐಆರ್)ಯನ್ನು ದಾಖಲಿಸಲು ಬಾಧ್ಯಸ್ಥರಾಗಿರುತ್ತಾರೆ.
ಇಂತಹ ಸಂದರ್ಭದಲ್ಲಿ ಯಾವುದೇ ಪ್ರಾಥಮಿಕ ವಿಚಾರಣೆಯನ್ನು ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ವಿಕ್ರಮ್‌ನಾಥ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ವಿಭಾಗೀಯ ನ್ಯಾಯಪೀಠ “ಪ್ರದೀಪ್ ನಿರಾಂಕಾರ್‌ನಾಥ್ ಶರ್ಮಾ Vs ಗುಜರಾತ್ ಸರ್ಕಾರ” ಪ್ರಕರಣದಲ್ಲಿ ಈ ತೀರ್ಪು ನೀಡಿದೆ. ಅರ್ಜಿದಾರರು ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ, 2003-2006ರ ಅವಧಿಯಲ್ಲಿ ಕಚ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಎದುರಿಸುತ್ತಿದ್ದರು.
ಅವರ ವಿರುದ್ಧ 2010ರಲ್ಲಿ ಹಲವು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಈ ಸಂಬಂಧ ನ್ಯಾಯಾಂಗ ಬಂಧನ ಎದುರಿಸಿದ್ದ ಅರ್ಜಿದಾರರು, ಪ್ರಸ್ತುತ ಎಲ್ಲ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ. ಹಲವು ಎಫ್‌ಐಆರ್‌ಗಳ ದಾಖಲಿಸಿದ ಕಾರಣಕ್ಕೆ ಬಾಧಿತರಾದ ಅರ್ಜಿದಾರರು, ಇನ್ನಷ್ಟು ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದ್ದು, ಎಫ್‌ಐಆರ್ ದಾಖಲಿಸುವ ಮುನ್ನ ಆರೋಪದ ಬಗ್ಗೆ ಪ್ರಾಥಮಿಕ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
“ಲಲಿತಾ ಕುಮಾರಿ Vs ಉತ್ತರ ಪ್ರದೇಶ” ಪ್ರಕರಣ ಉಲ್ಲೇಖಿಸಿದ್ದ ಅರ್ಜಿದಾರರು, ಪ್ರಾಥಮಿಕ ತನಿಖೆ ನಂತರವೇ ಎಫ್‌ಐಆರ್ ದಾಖಲಿಸುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿದ್ದರು. ಸಿಆರ್‌ಪಿಸಿ ಸೆಕ್ಷನ್ 154 ಪ್ರಕಾರ ಪೊಲೀಸ್ ಅಧಿಕಾರಿ ಮಾಹಿತಿ ಸ್ವೀಕರಿಸಿದ ತಕ್ಷಣ ಎಫ್‌ಐಆರ್ ದಾಖಲಿಸುವ ಬಾಧ್ಯತೆ ಹೊಂದಿದ್ದಾರೆ ಎಂದು ಎದುರುದಾರ ಪರ ವಾದ ಮಂಡಿಸಲಾಯಿತು.ಕೌಟುಂಬಿಕ ಪ್ರಕರಣಗಳು, ವಾಣಿಜ್ಯ ವ್ಯಾಜ್ಯಗಳು ಮತ್ತು ವೈದ್ಯಕೀಯ ನಿರ್ಲಕ್ಷ್ಯದಂತಹ ಪ್ರಕರಣಗಳಲ್ಲಿ “ಲಲಿತಾ ಕುಮಾರಿ” ತೀರ್ಪನ್ನು ಪಾಲಿಸಲಾಗುತ್ತದೆ ಎಂಬ ವಾದವನ್ನು ಮುಂದಿಡಲಾಯಿತು.
ಮೇಲ್ನೋಟಕ್ಕೆ ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸುವಂತಿದ್ದರೆ, ಯಾವುದೇ ಪ್ರಾಥಮಿಕ ವಿಚಾರಣೆಯನ್ನು ನಡೆಸದೆ ತಕ್ಷಣ ಎಫ್‌ಐಆರ್ ದಾಖಲಿಸುವ ಹೊಣೆಗಾರಿಕೆ ಪೊಲೀಸ್ ಅಧಿಕಾರಿಗೆ ಇದೆ ಎಂದು ನ್ಯಾಯಪೀಠ ತೀರ್ಪು ನೀಡಿತು. ಸದ್ರಿ ಪ್ರಕರಣದಲ್ಲಿ ಅರ್ಜಿದಾರ / ಆರೋಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಇದ್ದು, ದಾಖಲೆಗಳೂ ಮೇಲ್ನೋಟಕ್ಕೆ ಪೂರಕವಾಗಿವೆ.ಈ ಸಂದರ್ಭದಲ್ಲಿ ಆರೋಪಿಗೆ ತನ್ನ ಮೇಲಿನ ಆರೋಪದ ಬಗ್ಗೆ ವಿವರಣೆ ಕೋರುವ ಅವಕಾಶ ನೀಡುವಂತಿಲ್ಲ ಎಂದು ಹೈಕೋರ್ಟ್ ರಿಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಇದರಿಂದ ಬಾಧಿತರಾದ ಅರ್ಜಿದಾರರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.