ಬೆಳಗಾವಿ : ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಚಳಿಗಾಲದ ಅಧಿವೇಶನಕ್ಕೆ ಸುವರ್ಣ ಸೌಧವೂ ಸಿದ್ದವಾಗಿದೆ. ಜೊತೆಗೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ತಮ್ಮ ತಮ್ಮ ಅಸ್ತ್ರಗಳನ್ನು ಸಿದ್ಧಮಾಡಿಕೊಂಡು ಅಧಿವೇಶನಕ್ಕೆ ತಯಾರಾಗಿವೆ.
9 ದಿನಗಳ ಕಾಲ ನಡೆಯಲಿರುವ ಈ ಚಳಿಗಾಲ ಅಧಿವೇಶನವು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಪ್ರತಿಷ್ಠೆಯ ಜಿದ್ದಿಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನಕ್ಕೆ ಸಿದ್ಧವಾಗಿರುವ ಸುವರ್ಣ ಸೌಧವನ್ನು ಸ್ಪೀಕರ್ ಯುಟಿ ಖಾದರ್ ಅವರು ಪರಿಶೀಲಿಸಿದ್ದಾರೆ.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಕೇಳಿ ಬಂದಿರುವ ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಪ್ರಸ್ತಾಪ ಮಾಡಿದ ಅಂಶಗಳು, ವಕ್ಪ್ ವಿವಾದ, ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ, ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ನಿಯಮ ಸಡಿಲಿಕೆ ವಿಚಾರ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ವಿವಾದ, ಗ್ಯಾರಂಟಿ ಯೋಜನೆಯಲ್ಲಿ ಲೋಪ ಹೀಗೆ ಆಡಳಿತ ಪಕ್ಷದ ವಿರುದ್ಧ ಸಾಲು ಸಾಲು ಅಸ್ತ್ರವನ್ನು ಹಿಡಿದು ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷ ಸಿದ್ಧವಾಗಿದೆ.
ಇನ್ನು ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷ ಸಾಲು ಸಾಲು ಅಸ್ತ್ರ ಹಿಡಿದು ಸಿದ್ಧವಾದಂತೆ ಆಡಳಿತ ಪಕ್ಷವು ಕೂಡ ಕೋವಿಡ್ ಅಕ್ರಮದ ಅಸ್ತ್ರ ಹಿಡಿದು ರೆಡಿಯಾಗಿದೆ. ಯಡಿಯೂರಪ್ಪ ಅವಧಿಯಲ್ಲಿ ನಡೆದಿರುವ ಕೋವಿಡ್ ಅಕ್ರಮ ಕುರಿತು ನಿವೃತ್ತ ನ್ಯಾ. ಡಿ ಕುನ್ಹಾ ವರದಿ ಮುಂದಿಟ್ಟುಕೊಂಡು ಬಿಜೆಪಿಗೆ ತಿರುಗೇಟು ನೀಡಲು ತಯಾರಾಗಿದೆ.
ಇದರೊಂದಿಗೆ ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಬಿಡಿಎ ಹಗರಣ, ಗಣಿ ಹಗರಣಗಳು, ಬಿಜೆಪಿಯಲ್ಲಿ ವಿಜಯೇಂದ್ರ-ಯತ್ನಾಳ್ ಕಿತ್ತಾಟ, ಕೇಂದ್ರ ಸರಕಾರದಿಂದ ಅನುದಾನ ತಾರತಮ್ಯ, ಉಪ ಚುನಾವಣೆ ಸೋಲು ಸೇರಿ ಹಲವು ಬ್ರಹ್ಮಾಸ್ತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಅಧಿವೇಶನಕ್ಕೆ ಸನ್ನದ್ಧವಾಗಿದೆ. ಇನ್ನು ಸದನದಲ್ಲಿ ಯಾರ ಪ್ರಶ್ನೆಗೆ ಯಾರು ಉತ್ತರಿಸಬೇಕೆಂದು ಅಂತ ಸಚಿವರನ್ನು ಕೂಡ ಕಾಂಗ್ರೆಸ್ ನಿಯೋಜನೆ ಮಾಡಿದೆ.