ಚಿತ್ರದುರ್ಗ : ಓದುಗರಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿತ್ತಿ ಕಥೆ, ಕವಿತೆ, ಕಾದಂಬರಿ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕವಿ ಶಾಂತರಸ ಕೊಡುಗೆ ನೀಡಿದ್ದಾರೆಂದು ಹಿರಿಯೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಬಸವರಾಜ್ ಹೇಳಿದರು.
ಬಹುಮುಖಿ ಕಲಾ ಕೇಂದ್ರ ಚಿತ್ರದುರ್ಗ, ಸಂಸ ಥಿಯೇಟರ್ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಹಿರಿಯೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಶಾಂತರಸರ 100 ನೇ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಾಂತರಸ ಕವಿಗಳು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಜೂನಿಯರ್ ಕಾಲೇಜು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಮಾನವೀಯತೆಯ ಪ್ರತಿಪಾದಕರಾಗಿ ಸೇವೆ ಸಲ್ಲಿಸಿದರು. ಪುಸ್ತಕ ಪ್ರೇಮಿಯಾಗಿದ್ದ ಅವರು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಶಿವಶರಣರ ಮನೋಧರ್ಮವನ್ನು ಉಸಿರಾಗಿಸಿಕೊಂಡು ಕನ್ನಡಪರ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿ ದಿಟ್ಟತನ ಮೆರೆದ ಅವರು ನಿಷ್ಟುರವಾದಿಯಾಗಿದ್ದರೆಂದು ಗುಣಗಾನ ಮಾಡಿದರು.
ಉಪನ್ಯಾಸಕ ಸಲಬೊಮ್ಮನಹಳ್ಳಿ ಆರ್.ಶಿವಣ್ಣ ಮಾತನಾಡಿ ಶಾಂತರಸರವರ ಮೂಲ ಹೆಸರು ಶಾಂತಯ್ಯ. ರಾಯಚೂರು ಜಿಲ್ಲೆಯ ಹೆಂಬರಾಳು ಗ್ರಾಮದಲ್ಲಿ 1924 ಏಪ್ರಿಲ್
7 ರಂದು ಜನಿಸಿದರು. ಬ್ರಾಹ್ಮರಾಗಿ ಹುಟ್ಟಿ ಬ್ರಾಹ್ಮಣ್ಯವನ್ನು ತೊರೆದು ಇಲ್ಲಿನ ಕಂಚಾಚಾರ, ರೂಢಿ, ಸಂಪ್ರದಾಯ, ಮೂಢನಂಬಿಕೆಗಳ ವಿರುದ್ದ ಹೋರಾಡಿದರು. ಕನ್ನಡ ಭಾಷೆ ಉಳಿವಿಗಾಗಿ ಆರು ದಶಕಗಳ ಕಾಲ ಚಳುವಳಿಯಲ್ಲಿ ತೊಡಗಿ ಗೋಕಾಕ್ ಚಳುವಳಿಗೆ ಕಾವು ಹಚ್ಚಿದರು. ಕುವೆಂಪು, ಹರಿಹರ ಕವಿಗಳ ಬರವಣಿಗೆ ಇವರ ಮೇಲೆ ಗಾಢ ಪ್ರಭಾವ ಬೀರಿತು ಎಂದು ಸ್ಮರಿಸಿದರು.
ಉದಯೋನ್ಮುಖ ಬರಹಗಾರರನ್ನು ಉತ್ತೇಜಿಸಲು ಸತ್ಯ ಸ್ನೇಹಿ ಎಂಬ ಪ್ರಕಾಶನ ಆರಂಭಿಸಿ 50 ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ನಾಡಿಗೆ ಸಮರ್ಪಿಸಿದರು. 1942 ರಲ್ಲಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2006 ರಲ್ಲಿ ಬೀದರ್ನಲ್ಲಿ ನಡೆದ 72 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆನ್ನುವುದನ್ನು ನೆನಪಿಸಿಕೊಂಡರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ ಕವಿ ಶಾಂತರಸ ವೃತ್ತಿಯಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ
ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಬರಹಗಾರರಾಗಿ ರಾಜ್ಯದಲ್ಲಿ ಗುರುತಿಸಿಕೊಂಡವರು ಎಂದು ಗುಣಗಾನ ಮಾಡಿದರು.
ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎನ್.ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ರಂಗಕರ್ಮಿ ಮಲ್ಲಪ್ಪನಹಳ್ಳಿ ಮಹಾಲಿಂಗಪ್ಪ, ಬಹುಮುಖಿ ಕಲಾ ಕೇಂದ್ರದ ಕಾರ್ಯದರ್ಶಿ ಟಿ.ಮಧು, ಟಿ.ಶ್ರೀನಿವಾಸಮೂರ್ತಿ, ದೊರೇಶ್ ಹಾಗೂ ಇನ್ನಿತರರು ಹಾಜರಿದ್ದರು.