ಚಿತ್ರದುರ್ಗ : ಸಂವಿಧಾನ ವಿರೋಧಿಸುತ್ತಿರುವವರ ಕೈಯಲ್ಲಿ ದೈತ್ಯ ರಾಜಕೀಯ ಬಲವಿರುವುದರಿಂದ ಸಂವಿಧಾನಕ್ಕೆ ದೊಡ್ಡ ಪ್ರಮಾಣದ ಅಪಾಯ, ಸವಾಲು ಎದುರಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಿದ್ದರೆ ಸಮಾನತೆ ಎನ್ನುವುದು ದೂರದ ಮಾತು ಎಂದು ಎ.ನಾರಾಯಣ್ ಎಚ್ಚರಿಸಿದರು.
ದಾವಣಗೆರೆ ರಸ್ತೆ ಯೋಗವನ ಬೆಟ್ಟದ ಸಮೀಪವಿರುವ ಧಮ್ಮ ಕೇಂದ್ರದಲ್ಲಿ ಎದ್ದೇಳು ಕರ್ನಾಟಕ, ನಾಡು ನುಡಿ ಬಳಗ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಂಬೇಡ್ಕರ್ ವಿಚಾರ ವೇದಿಕೆ ಸಹಯೋಗದೊಂದಿಗೆ ಶನಿವಾರ ನಡೆದ ಅರಿವಿನ ಚಾವಡಿಯಲ್ಲಿ ಸಂವಿಧಾನದ ಮುಂದಿರುವ ಸವಾಲುಗಳು ಕುರಿತು ಮಾತನಾಡಿದರು.
ಸಂವಿಧಾನದ ಮುಂದೆ ಸವಾಲಿದೆ. ಗಾಂಧಿ ಮೇಲಿನ ಗುಂಡು ಕೇವಲ ನೆಪ ಮಾತ್ರ. ಸಂವಿಧಾನ ಜಾರಿಯಾಗುವುದಕ್ಕಿಂತ ಮುಂಚೆ ದಾಳಿಯಾಯಿತು. ಎಲ್ಲರೂ ಸಂವಿಧಾನ ಉಳಿಸಿಕೊಳ್ಳುವ ಪ್ರಶ್ನೆ ಹಾಕಿಕೊಳ್ಳಬೇಕು. ಗಾಂಧಿಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಿರುವು ಕೊಟ್ಟರು. ದೇಶದಲ್ಲಿ ಧೃತರಾಷ್ಟ್ರ ಆಲಿಂಗನ ಕೆಲಸ ನಡೆಯುತ್ತಿದೆ. ಸಂವಿಧಾನ ರಕ್ಷಣೆ ಎನ್ನುವುದು ದೇಶದ ಎರಡನೆ ಸ್ವಾತಂತ್ರ್ಯ ಸಂಗ್ರಾಮವಿದ್ದಂತೆ. 1947, ಆ.15 ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. 1950, ಜ.26 ರಂದು ಜನರಿಗೆ ಸ್ವಾತಂತ್ರ್ಯ ಸಿಕ್ಕಿತು. ಸಂವಿಧಾನ ವಿರೋಧಿಗಳು ಕ್ಷಣ ಕ್ಷಣಕ್ಕೂ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವುದನ್ನು ಗಮನಿಸಿದರೆ ಸಂವಿಧಾನ ಅಪಾಯದಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಸಂವಿಧಾನ ಹುಟ್ಟುವ ಮೊದಲೇ ಸಂವಿಧಾನ ವಿರೋಧಿಸುತ್ತಿರುವವರ ಕೈಯಲ್ಲಿ ರಾಜಕೀಯ ಅಧಿಕಾರವಿರುವುದರಿಂದ ಪ್ರಶ್ನೆ ಮಾಡಲು ಜನ ಹೆದರುವಂತಾಗಿದೆ. ಯಾವ ಕಾರಣಕ್ಕೆ ಸಂವಿಧಾನ ವಿರೋಧಿಸುತ್ತಿದ್ದಾರೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಸಂವಿಧಾನ ತಿದ್ದುಪಡಿ ಸಂವಿಧಾನದ ಮೇಲಾಗುವ ದಾಳಿಯಲ್ಲ. ಏಕೆಂದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರೆ ಸಂವಿಧಾನ ತಿದ್ದುಪಡಿಯಾಗಬೇಕೆಂದು ಹೇಳಿದ್ದಾರೆ. ಪ್ರಭುವಿನ ಕಲ್ಪನೆಯಿಂದ ದೇಶದ ಜನ ಇನ್ನು ಹೊರಬರಲು ಆಗುತ್ತಿಲ್ಲ. ಇದು ಸಂವಿಧಾನದ ಮುಂದಿರುವ ಸಮಸ್ಯೆ. ಸಂವಿಧಾನ ತಿದ್ದುಪಡಿ, ಸಂವಿಧಾನದ ಮೇಲಾಗುವ ದಾಳಿ ಎರಡು ಒಂದಲ್ಲ ಎಂದು ಎ.ನಾರಾಯಣ್ ಹೇಳಿದರು.
ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಪ್ರತಿಕ್ರಿಯೆ ನೀಡಿ ಸಂವಿಧಾನದ ಮೂಲ ಆಶಯಕ್ಕೆ ಧಾರ್ಮಿಕ ಮೂಲಭೂತವಾದಿಗಳು ವಿರೋಧಿಗಳಾಗಿದ್ದಾರೆ. ಇದೊಂದು ಅಪಾಯಕಾರಿ. ಈ ದೇಶದ ಮುಸಲ್ಮಾನರು ದಿನಬೆಳಗಾದರೆ ಪೌರತ್ವ ಸಾಬೀತು ಪಡಿಸುವ ಅಪಾಯದಲ್ಲಿದ್ದಾರೆ. ಅನ್ಯ ಜಾತಿಯವರನ್ನು ವಿವಾಹವಾದ ಮಕ್ಕಳನ್ನೆ ಹೆತ್ತ ತಂದೆ ತಾಯಿಗಳು ಹತ್ಯೆ ಮಾಡುತ್ತಿರುವುದನ್ನು ನೋಡಿದರೆ ಯಾವ ನಾಗರೀಕ ಸಮಾಜದಲ್ಲಿದ್ದೇವೆನ್ನುವ ಭೀತಿ ಕಾಡುತ್ತಿದೆ. ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯಿಂದ ಮಾತ್ರ ದೇಶ ಉಳಿಯಲು ಸಾಧ್ಯವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ವಾಧಿಕಾರಿ ಒಲವಿರುವ ಹಿಟ್ಲರ್ ಅನುಯಾಯಿಗಳು ದೇಶ ಆಳುತ್ತಿದ್ದಾರೆ. ಕಾಂಗ್ರೆಸ್ ಕೂಡ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿತು. ಪ್ರಜಾಪ್ರಭುತ್ವವಿರುವುದು ಹೆಸರಿಗಷ್ಟೆ. ಸಂವಿಧಾನವನ್ನು ಅಣು ಅಣುವಾಗಿ ಕೊಲ್ಲಲಾಗುತ್ತಿದೆ. ಪರ್ಯಾಯ ರಾಜಕೀಯಕ್ಕೆ ಮನಸ್ಸುಳ್ಳವರು ಇದನ್ನು ಶೋಧಿಸಬೇಕು. ಕರಾವಳಿ ಪ್ರದೇಶಗಳಲ್ಲಿ ಕೋಮುವಾದಕ್ಕೆ ಬಲಿಯಾಗಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಧಮ್ಮ ಕೇಂದ್ರದ ಆರ್.ವಿಶ್ವಸಾಗರ್, ಅನ್ನಪೂರ್ಣ ವಿಶ್ವಸಾಗರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ, ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್ಬಾಬು ಸೇರಿದಂತೆ ಅನೇಕ ಚಿಂತಕರು, ಬುದ್ದಿಜೀವಿಗಳು ಅರಿವಿನ ಚಾವಡಿಯಲ್ಲಿ ಭಾಗವಹಿಸಿದ್ದರು.
































